ಜಾಗತಿಕ ಮಾರುಕಟ್ಟೆಯಲ್ಲಿ 1,000 ಕ್ಕೂ ಹೆಚ್ಚು ಅಂಕ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ: ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಗುರುವಾರ ಮತ್ತೆ ಕುಸಿತ ಕಂಡುಬಂದಿದ್ದು 1,030 ಅಂಕಗಳ ಭಾರೀ ಕುಸಿತ ಕಂಡುಬಂದು 34 ಸಾವಿರದಲ್ಲಿ ಬೆಳಗಿನ ವಹಿವಾಟು ನಡೆಸಿತು. ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ ಕಂಡುಬಂದಿದ್ದು 74 ರೂಪಾಯಿ 45 ಪೈಸೆಯಷ್ಟಾಗಿದೆ.ತಂತ್ರಜ್ಞಾನ ಕ್ಷೇತ್ರದಲ್ಲಿನ ಷೇರು ಮಾರುಕಟ್ಟೆಯಲ್ಲಿನ ವ್ಯತ್ಯಾಸ, ಫೆಡ್ ದರ ಏರಿಕೆ ಮತ್ತು ಚೀನಾದೊಂದಿಗೆ ಅಮೆರಿಕಾದ ವ್ಯಾಪಾರ ಕದನ ಮುಂದುವರಿಕೆಯಿಂದಾಗಿ ಷೇರು ಸಂವೇದಿ ಸೂಚ್ಯಂಕ ಮತ್ತು ಭಾರತದ ರೂಪಾಯಿ ಕುಸಿತ ಕಾಣಲು ಕಾರಣವಾಗಿದೆ.ಈ ವಾರದ ಆರಂಭದಲ್ಲಿ ಸತತ ಮೂರು ದಿನಗಳ ಕಾಲ ಷೇರು ಮಾರುಕಟ್ಟೆ ವ್ಯವಹಾರದಲ್ಲಿ ಪ್ರಗತಿ ಕಂಡುಬಂದಿತ್ತು. ಜಾಗತಿಕ ಆರ್ಥಿಕ ಬೆಳವಣಿಗೆ ಕುಸಿಯುತ್ತಿದೆ ಎಂಬ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವರದಿ ಮತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಯ ದುರ್ಬಲತೆ ಕೂಡ ಹೂಡಿಕೆದಾರರಲ್ಲಿ ಇಂದು ಉತ್ಸಾಹ ಕುಗ್ಗಿಸಿದೆ.ನಿನ್ನೆಯ ದಿನದ ವಹಿವಾಟು ಅಂತ್ಯಕ್ಕೆ 461.42 ಅಂಕಗಳ ಏರಿಕೆ ಕಂಡುಬಂದಿದ್ದ ಸಂವೇದಿ ಸೂಚ್ಯಂಕ ಇಂದು 1,030.40 ಅಂಕಗಳ ಭಾರೀ ಕುಸಿತ ಕಂಡುಬಂದಿದ್ದು ಇಂದು ಬೆಳಗಿನ ವಹಿವಾಟು ಆರಂಭಕ್ಕೆ 33,730.50ರಲ್ಲಿ ವಹಿವಾಟು ನಡೆಸಿತು.ರಾಷ್ಟ್ರೀಯ ಸಂವೇದಿ ಸೂಚ್ಯಂಕ ನಿಫ್ಟಿ ಸಹ 281.70 ಅಂಕಗಳಷ್ಟು ಕುಸಿದು 10,200ರಲ್ಲಿ ವಹಿವಾಟು ನಡೆಸಿದೆ. ರಿಯಾಲ್ಟಿ, ಐಟಿ, ಲೋಹದ ಪದಾರ್ಥಗಳು, ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಷೇರುಗಳ ಮರಾಟದಲ್ಲಿ ಸಹ ಕುಸಿತ ಕಂಡುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ