ಪಂಚಾಯತ್ ರಾಜ್ ಇಲಾಖೆ ಬೇರೆ ಇಲಾಖೆಯಂತಲ್ಲ; ದಿನಕ್ಕೆ 10 ಗಂಟೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು: ಗ್ರಾಮೀಣ ಮೂಲ ಸೌಕರ್ಯ ಇಲಾಖೆ ನಿರ್ದೇಶಕ ಎನ್.ಕೃಷ್ಣಪ್ಪ

ಬೆಂಗಳೂರು ಗ್ರಾಮಾಂತರ :ಪಂಚಾಯತ್ ರಾಜ್ ಇಲಾಖೆ ಎಂಬುದು ಬೇರೆ ಇಲಾಖೆಯಂತಲ್ಲ. ಬೆಳಗ್ಗೆ ಹತ್ತು ಗಂಟೆಗೆ ಬಂದು ಸಂಜೆ ಐದು ಗಂಟೆಗೆ ಟಾಕುಟೀಕಾಗಿ ಹೋದರೆ ಕೆಲಸವಾಗುವುದಿಲ್ಲ. ದಿನಕ್ಕೆ ಹತ್ತು ಗಂಟೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಆಗ ಮಾತ್ರ ಕೆಲಸ ಯಶಸ್ವಿಯಾಗಲು ಸಾಧ್ಯ ಎಂದು ಗ್ರಾಮೀಣ ಮೂಲ ಸೌಕರ್ಯ ಇಲಾಖೆ ನಿರ್ದೇಶಕ ಎನ್.ಕೃಷ್ಣಪ್ಪ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್‍ನಲ್ಲಿ ಹಮ್ಮಿಕೊಂಡಿದ್ದ ಜೈವಿಕ ಅನಿಲ ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಭಾಗದವರಿಗೆ ಸೇವೆ ಒದಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವರಿಗೆ ಸರ್ಕಾರದ ಸೌಲಭ್ಯಗಳು, ಯೋಜನೆಗಳನ್ನು ಸರಿಯಾಗಿ ಒದಗಿಸಿಕೊಡಬೇಕು. ಅವರಿಗೆ ಎಲ್ಲಾ ಸೌಲಭ್ಯಗಳು ಸರಿಯಾಗಿ ತಲುಪಬೇಕು. ಅವರ ಜೀವನ ಸುಧಾರಣೆಯಾಗಬೇಕು ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿ.ಪಂ. ಸಿಇಒ ಆರ್ ಲತಾ ಮಾತನಾಡಿ, ಜೈವಿಕ ಅನಿಲ ಉತ್ಪಾದನೆ ಉತ್ತಮವಾದ ಯೋಜನೆಯಾಗಿದೆ. ಇದರ ಬಗ್ಗೆ ನನಗೇನೂ ಅನುಮಾನವಿಲ್ಲ. ಆದರೆ ಹೆಚ್ಚು ಹಣ ವೆಚ್ಚ ಮಾಡಿ ಒಂದು ಘಟಕ ಸ್ಥಾಪನೆ ಮಾಡಿದರೆ ಅದರಿಂದ ಕಾಫಿ ಕೂಡ ಮಾಡಲು ಆಗುವುದಿಲ್ಲ ಎಂದು ಪಿಡಿಒಗಳು ಹೇಳುತ್ತಾರೆ. ಹಾಗಾಗಿ ಯೋಚನೆಯಾಗಿದೆ ಎಂದರು.
ಸುಮಾರು ಒಂದು ಸಾವಿರ ಜೈವಿಕ ಅನಿಲ ಘಟಕ ನಿರ್ಮಾಣದ ಗುರಿ ಹೊಂದಿದ್ದು, ಪಿಡಿಒಗಳಿಗೆ ಸೂಚಿಸಿದ್ದೇನೆ. ಅಷ್ಟೊಂದು ಹಣ ವೆಚ್ಚ ಮಾಡಿದರೆ ನಾವು ಅಂದುಕೊಂಡಷ್ಟು ಅನಿಲ ಉತ್ಪಾದನೆ ಆಗುವುದಿಲ್ಲ ಎನ್ನುತ್ತಿದ್ದಾರೆ. ಈ ಎಲ್ಲದರ ಬಗ್ಗೆ ಪರಿಶೀಲಿಸಿ ತಜ್ಞರು ವರದಿ ಕೊಟ್ಟರೆ ಹೆಚ್ಚು ಘಟಕಗಳನ್ನು ಮಾಡಲಾಗುವುದು. ಇದರಿಂದ ಗ್ರಾಮೀಣ ಜನರಿಗೆ ಉಪಯೋಗವಾಗಬೇಕೆಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿ.ಪಂ. ಅಧ್ಯಕ್ಷೆ ಅನಂತಕುಮಾರಿ ಮಾತನಾಡಿ, ಮಹಿಳೆ ದಿನಪೂರ್ತಿ ತಮ್ಮ ಕುಟುಂಬಕ್ಕಾಗಿ ದುಡಿಯುತ್ತಾರೆ. ಜೈವಿಕ ಅನಿಲ ಸ್ಥಳೀಯವಾಗಿ ಉತ್ಪಾದನೆಯಾದರೆ ಮಹಿಳೆಯರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಗ್ರಾಮಸಭೆಗಳಲ್ಲಿ ಮಾಹಿತಿ ಕೊಟ್ಟರೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ