ನವದೆಹಲಿ : ಬಿಸಿಲಿನ ತಾಪಕ್ಕೆ 2015ರಲ್ಲಿ ದೇಶದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಜಾಗತಿಕ ತಾಪಮಾನವೇನಾದರೂ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಷಿಯಸ್ ಹೆಚ್ಚಾದರೆ ಅದೇ ರೀತಿಯ ಬಿಸಿಗಾಳಿ ಮತ್ತೆ ನಮ್ಮ ದೇಶದ ಹಲವು ಭಾಗಗಳನ್ನು ಆವರಿಸುವ ಅಪಾಯವಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಒಂದುವೇಳೆ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 ಡಿಗ್ರಿ ಸೆಲ್ಷಿಯಸ್ ಹೆಚ್ಚಾದರೆ ಉರಿಬಿಸಿಲಿನ ತಾಪದ ಪರಿಣಾಮವನ್ನು ಎದುರಿಸುವ ರಾಷ್ಟ್ರಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಪ್ರಥಮ ಸ್ಥಾನದಲ್ಲಿವೆ ಎಂದು ಯುನಿವರ್ಸಿಟಿ ಆಫ್ ವಾಷಿಂಗ್ಟನ್, ವಿಶ್ವ ಆರೋಗ್ಯ ಸಂಸ್ಥೆ, ಕ್ಲೈಮೇಟ್ ಟ್ರ್ಯಾಕರ್ ತಜ್ಞರು ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಡಿಸೆಂಬರ್ ತಿಂಗಳಲ್ಲಿ ಪೋಲೆಂಡ್‌ನಲ್ಲಿ ನಡೆಯಲಿರುವ ಕಟೋವೈಸ್ ಸಮಾವೇಶದಲ್ಲಿ ಹವಾಮಾನ ಬದಲಾವಣೆಗಳನ್ನು ಎದುರಿಸಲು ಪ್ಯಾರಿಸ್ ಒಪ್ಪಂದದ ಪರಿಶೀಲನೆ ನಡೆಯಲಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾದ ಭಾರತ ದೇಶ ಈ ಜಾಗತಿಕ ಸಮಾವೇಶದಲ್ಲಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬ ಕುತೂಹಲ ಮೂಡಿದೆ. ಒಂದುವೇಳೆ ಅತಿಯಾದ ಬಿಸಿಲಿನಿಂದ ಹೊರಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾದರೆ ಆಹಾರದ ಅಭದ್ರತೆ, ಆಹಾರ ಉತ್ಪನ್ನಗಳ ಬೆಲೆ ಏರಿಕೆ, ಜನರ ವಲಸೆ, ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರಲಿವೆ.
ಮುಂದಿನ ಕೆಲವು ವರ್ಷಗಳು ಮಾನವನ ಇತಿಹಾಸದಲ್ಲಿ ಬಹಳ ಮುಖ್ಯವಾದುದೆಂದು ಪರಿಗಣಿಸಬಹುದು ಎಂದು ಹೇಳಿರುವ ಇಂಟರ್ಗವರ್ನಮೆಂಟಲ್ ಪ್ಯಾನಲ್ ಫಾರ್ ಕ್ಲೈಮೇಟ್ ಚೇಂಜ್ (ಐಪಿಸಿಸಿ) ಸಹ ಮುಖ್ಯಸ್ಥ ಡೆಬ್ರಾ ರಾಬರ್ಟ್ಸ್, ಇದೇ ರೀತಿ ವಾತಾವರಣದ ಉಷ್ಣಾಂಶ ಹೆಚ್ಚಾಗುತ್ತಿದ್ದರೆ 2030ರಿಂದ 2050ರೊಳಗೆ 1.5 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ತಲುಪುವ ಅಪಾಯವನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.
ಇದುವರೆಗೂ ಎಷ್ಟು ಬಲಿ?
2013ರಿಂದ 2016ರವರೆಗೆ ದೇಶಾದ್ಯಂತ 4,620 ಜನ ಸಾವನ್ನಪ್ಪಿದ್ದಾರೆ. 2013ರಲ್ಲಿ 1,443, 2014ರಲ್ಲಿ 549, 2015ರಲ್ಲಿ 2,081, 2016ರಲ್ಲಿ 1,600 ಜನ ಬಲಿಯಾಗಿದ್ದಾರೆ. ಇವಿಷ್ಟು ಬಿಸಿಗಾಳಿಗೆ ನೇರವಾಗಿ ಬಲಿಯಾದವರ ಸಂಖ್ಯೆಯಾದರೆ ಪರೋಕ್ಷವಾಗಿ ಬಲಿಯಾದವರ ಪ್ರಮಾಣ ಇನ್ನೂ ಹೆಚ್ಚೇ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ತೆಲಂಗಾಣ, ಆಂಧ್ರಪ್ರದೇಶದಲ್ಲಿ ಬಿಸಿಗಾಳಿಯಿಂದ ಸತ್ತವರ ಸಂಖ್ಯೆ ಹೆಚ್ಚು.