ದಕ್ಷಿಣ ಕನ್ನಡ ಜಿಲ್ಲೆಯಿಂದ ಕಣಕ್ಕಿಳಿಯಲಿದ್ದಾರೆಯೇ ಪ್ರಧಾನಿ ಮೋದಿ…?

ಬೆಂಗಳೂರು,ಅ.8- ಕೇಂದ್ರದಲ್ಲಿ ಮತ್ತೆ ಅಧಿಕಾರ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ ದಕ್ಷಿಣ ಭಾರತದಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೆ ಕರ್ನಾಟಕದಿಂದ ಕಣಕ್ಕಿಳಿಸಲಿದೆಯೇ…? ಹೌದೆನ್ನುತ್ತಿವೆ ಪಕ್ಷದ ಮೂಲಗಳು.

ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ದಕ್ಷಿಣ ಭಾರತದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ನೆರೆಯ ಮಹಾರಾಷ್ಟ್ರದಲ್ಲೂ ಕಮಲ ಅರಳಿಸಲು ತಂತ್ರ ರೂಪಿಸಿರುವ ಬಿಜೆಪಿ ಮೋದಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಕಣಕ್ಕಿಳಿಸಲು ತಂತ್ರ ರೂಪಿಸಿದೆ. ಹೂಡುತ್ತಿದೆ.
ಈಗಾಗಲೇ ಒರಿಸ್ಸಾದ ಪುರಿಯಿಂದ ಸ್ಪರ್ಧಿಸಲು ಮೋದಿ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ದಕ್ಷಿಣ ಭಾರತದಲ್ಲೂ ಹವಾ ಸೃಷ್ಟಿಸಲು ಬಿಜೆಪಿ ಮೋದಿಯನ್ನೇ ಕರ್ನಾಟಕದಿಂದ ಕಣಕ್ಕಿಳಿಸುವ ಮೂಲಕ ಚುನಾವಣಾ ಕಾವು ಹೆಚ್ಚಿಸಲು ಮುಂದಾಗಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಮಾಡಿಕೊಂಡರೆ 28 ಕ್ಷೇತ್ರಗಳ ಪೈಕಿ ಕನಿಷ್ಠ 13ರಿಂದ 15 ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಒಂದು ವೇಳೆ ಮೋದಿ ಕರ್ನಾಟಕದಿಂದಲೇ ಅಖಾಡಕ್ಕಿಳಿದರೆ ಸಹಜವಾಗಿ ಮತದಾರರ ಮೇಲೆ ವ್ಯಾಪಕ ಪರಿಣಾಮ ಬೀರಲಿದ್ದು, ಇದರಿಂದ ನೆರೆ ರಾಜ್ಯಗಳಲ್ಲೂ ಭರ್ಜರಿ ಫಸಲು ತೆಗೆಯಬಹುದೆಂಬುದು ಕಮಲ ನಾಯಕರ ಲೆಕ್ಕಾಚಾರವಾಗಿದೆ.

ಆರ್‍ಎಸ್‍ಎಸ್ ನಾಯಕರ ಸೂಚನೆಯಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಮಾತುಕತೆ ನಡೆಸಿಯೇ ಈ ತೀರ್ಮಾನಕ್ಕೆ ಬರಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಹೇಳಿಕೇಳಿ ಬಿಜೆಪಿಯ ಭದ್ರಕೋಟೆ. ಕಳೆದ ಹಲವು ದಶಕಗಳಿಂದ ಲೋಕಸಭೆ ಚುನಾವಣೆಯಲ್ಲಿ ಇಲ್ಲಿನ ಬಿಜೆಪಿಯ ಅಶ್ವಮೇಧವನ್ನು ಕಟ್ಟಿ ಹಾಕಲು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಕ್ಕೂ ಸಾಧ್ಯವಾಗಿಲ್ಲ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಮಲ ಅರಳಿತ್ತು. ಇವೆಲ್ಲವನ್ನೂ ಲೆಕ್ಕಾಚಾರ ಹಾಕಿಯೇ ಬಿಜೆಪಿ ದಕ್ಷಿಣ ಕನ್ನಡದಿಂದಲೇ ಮೋದಿಯವರನ್ನು ಅಖಾಡಕ್ಕಿಳಿಸಲು ಕಸರತ್ತು ನಡೆಸುತ್ತಿದೆ.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಾಗದಿದ್ದರೂ ಅತಿ ಹೆಚ್ಚು ಸ್ಥಾನ ಗಳಿಸಿದ್ದು ಮೋದಿ ನಾಮ ಬಲದಿಂದಲೇ. ರಾಜ್ಯದಲ್ಲೂ ಮೋದಿ ಬಗ್ಗೆ ಮತದಾರರಿಗೆ ಒಳ್ಳೆಯ ಅಭಿಪ್ರಾಯವಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಉತ್ತರ ಭಾರತದ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರ ಎನಿಸಿದ ವಾರಣಾಸಿಯಿಂದ ಸ್ಪರ್ಧೆ ಮಾಡಿದ್ದರು. ಪರಿಣಾಮ ಮೋದಿ ಅಲೆಯಿಂದ ಉತ್ತರಪ್ರದೇಶದ 80 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮೈತ್ರಿಕೂಟ 73 ಕ್ಷೇತ್ರಗಳನ್ನು ತನ್ನ ಬಗಲಿಗೆ ಹಾಕಿಕೊಂಡಿತ್ತು.

ಮೋದಿ ಸುನಾಮಿಗೆ ನೆರೆಯ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಘಡ, ಬಿಹಾರ, ಉತ್ತರಾಖಂಡ್, ಜಾರ್ಖಂಡ್, ದೆಹಲಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು.
ಈಗ ಇದೇ ತಂತ್ರವನ್ನು ಹೆಣೆದಿರುವ ಚುನಾವಣಾ ಚಾಣಾಕ್ಷ ಅಮಿತ್ ಷಾ ಮೋದಿಯನ್ನು ಕರ್ನಾಟಕದಿಂದ ಕಣಕ್ಕಿಳಿಸಿದರೆ ಕೇವಲ ಕರ್ನಾಟಕವಲ್ಲದೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಲಾಭವಾಗಲಿದೆ ಎಂಬ ಗ್ರಹಿಕೆಯಿಂದಲೇ ಈ ತಂತ್ರ ಹೆಣೆಯಲಾಗಿದೆ.

ಒಂದು ವೇಳೆ ನರೇಂದ್ರಮೋದಿ ಸ್ಪರ್ಧಿಸಿದರೆ ಮಾಜಿ ಪ್ರಧಾನಿ ಇಂದಿರಾಗಾಂಧಿ ನಂತರ ಪ್ರಧಾನಿಯೊಬ್ಬರು ಕರ್ನಾಟಕದಲ್ಲಿ ಸ್ಪರ್ಧಿಸಿದಂತಾಗುತ್ತದೆ. ಈ ಹಿಂದೆ ಇಂದಿರಾಗಾಂಧಿ ಅವರು ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ನಿರಾಕರಣೆ:
ರಾಜ್ಯದಲ್ಲಿ ಮೋದಿ ಸ್ಪರ್ಧಿಸುವ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದು, ಇದು ನಿರಾಧಾರ. ಹೈಕಮಾಂಡ್ ಮಟ್ಟದಲ್ಲಿ ಈ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ