ಬೆಂಗಳೂರು,ಅ.8-ನಾಳೆ ಅಥವಾ ಬುಧವಾರ ಸಭೆ ನಡೆಸಿ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಜಮಖಂಡಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯ ಅಭ್ಯರ್ಥಿಗಳ ಜೊತೆ ಮಾತುಕತೆ ನಡೆಸಿ ಅಭಿಪ್ರಾಯಗಳನ್ನು ಪಡೆಯಲಾಗಿದೆ.
ಮತ್ತೊಮ್ಮೆ ನಾಳೆ ಅಥವಾ ಬುಧವಾರ ಮುಖಂಡರೆಲ್ಲರೂ ಸಭೆ ಸೇರಿ ಈ ಐದು ಕ್ಷೇತ್ರಗಳಿಗೆ ಸರ್ವಸಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ತಿಳಿಸಿದರು.
ಐದು ಕ್ಷೇತ್ರಗಳಿಗೆ ಆಕಾಂಕ್ಷಿಗಳು ಸಾಕಷ್ಟಿದ್ದಾರೆ. ಪ್ರತಿಯೊಂದು ಕ್ಷೇತ್ರಕ್ಕೂ ಎರಡರಿಂದ ಮೂವರು ಅಭ್ಯರ್ಥಿಗಳು ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯ ಪಡೆದು ಯಾರಿಗೆ ಟಿಕೆಟ್ ನೀಡಬೇಕೆಂಬುದನ್ನು ಕೋರ್ ಕಮಿಟಿಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಯಾವುದೇ ರೀತಿಯ ಭಿನ್ನಮತ, ಅಸಮಾಧಾನಕ್ಕೆ ಆಸ್ಪದ ನೀಡದೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಐದು ಕ್ಷೇತ್ರಗಳನ್ನು ಪಕ್ಷ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು.
ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಶ್ರೀಕಾಂತ್ ಕುಲಕರ್ಣಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಚರ್ಚಿಸಲಾಗುವುದು. ನನಗೂ ಕೂಡ ಅವರ ಬೆಂಬಲಿಗರ ಮನವಿ ಮನವರಿಕೆಯಾಗಿದೆ. ಅಂತಿಮವಾಗಿ ಪಕ್ಷ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕೆಂದು ಸೂಚಿಸಿದರು.
ಶ್ರೀರಾಮುಲುಗೆ ಹೊಣೆ:
ಇನ್ನು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಹೊಣೆಗಾರಿಕೆಯನ್ನು ಶಾಸಕ ಶ್ರೀರಾಮುಲುಗೆ ನೀಡಲಾಗಿದೆ. ಜಿಲ್ಲೆಯಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ರಾಮುಲು ಸೂಚಿಸಿದವರಿಗೆ ಟಿಕೆಟ್ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಲು ಹಲವಾರು ಹೆಸರುಗಳು ಕೇಳಿ ಬರುತ್ತಿರುವುದರಿಂದ ಅಂತಿಮವಾಗಿ ರಾಮುಲು ಸೂಚಿಸಿದವರನ್ನೇ ಅಭ್ಯರ್ಥಿ ಮಾಡಲು ಪಕ್ಷ ತೀರ್ಮಾನಿಸಿದೆ.
ಇನ್ನು ಉಪಚುನಾವಣೆಯ ಉಸ್ತುವಾರಿಯನ್ನು ರಾಮುಲು ಹೆಗಲಿಗೆ ನೀಡಲು ಬಿಜೆಪಿ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.