ಉಪ ಚುನಾವಣೆಗೆ ನಾಳೆ ಅಧಿಸೂಚನೆ: ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು, ಅ.8- ಮಿನಿ ಮಹಾ ಸಮರ ಎಂದೇ ಪರಿಗಣಿಸಲಾಗಿರುವ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.

ಭಾರತದ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದಂತೆ ಚುನಾವಣಾ ಅಧಿಕಾರಿಗಳು ನಾಳೆ ಅಧಿಸೂಚನೆ ಹೊರಡಿಸಲಿದ್ದಾರೆ. ಮಂಡ್ಯ, ಶಿವಮೊಗ್ಗ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧಿಸೂಚನೆಯನ್ನು ಹೊರಡಿಸಲಿದ್ದಾರೆ.

ಅದೇ ರೀತಿ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಾಳೆಯಿಂದಲೇ ಆರಂಭವಾಗಲಿದೆ.

ಆದರೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಇನ್ನೂ ಕಣಕ್ಕಿಳಿಸಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಲ್ಲ.
ಹೀಗಾಗಿ ರಾಜಕೀಯ ಪಕ್ಷಗಳ ಚುನಾವಣಾ ಸ್ಪರ್ಧಾಕಾಂಕ್ಷಿಗಳು ನಾಮಪತ್ರ ಸಲ್ಲಿಕೆ ಮಾಡುವುದನ್ನು ವಿಳಂಬ ಮಾಡುವ ಸಾಧ್ಯತೆ ಹೆಚ್ಚಾಗಿವೆ. ನಾಳೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗುವುದರಿಂದ ರಾಜಕೀಯ ಪಕ್ಷಗಳು ಕೂಡ ತಮ್ಮ ಅಭ್ಯರ್ಥಿಗಳನ್ನು ತರಾತುರಿಯಲ್ಲಿ ಆಯ್ಕೆ ಮಾಡುವ ಸಾಧ್ಯತೆಗಳಿವೆ.

ಆದರೂ ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 16ರವರೆಗೂ ಅವಕಾಶವಿರುವುದರಿಂದ ಹೆಚ್ಚಿನ ಸ್ಪರ್ಧಾಕಾಂಕ್ಷಿಗಳಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಕೊನೆಗಳಿಗೆಯಲ್ಲಿ ಮಾಡುವುದನ್ನು ತಳ್ಳಿಹಾಕುವಂತಿಲ್ಲ
ನಾಳೆಯಿಂದ ನಾಮಪತ್ರ ಪ್ರಕ್ರಿಯೆ ಆರಂಭವಾದರೂ ಅಕ್ಟೋಬರ್ 16ರವರೆಗೂ ಸಲ್ಲಿಕೆಗೆ ಅವಕಾಶವಿದೆ. ಅ.17ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಅ.20ರಂದು ನಾಮಪತ್ರ ವಾಪಾಸ್ ಪಡೆಯಲು ಕಾಲಾವಕಾಶವಿದೆ. ನವೆಂಬರ್ 3ರಂದು ಮತದಾನ ನಡೆಯಲಿದ್ದು ನ.6ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ