ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ: ಬಿಜೆಪಿ ಮಹತ್ವದ ಸಭೆ

ಬೆಂಗಳೂರು,ಅ.8-ಜಿದ್ದಾಜಿದ್ದಿನ ರಣರಂಗವಾಗಿರುವ ಮೂರು ಲೋಕಸಭಾ ಕ್ಷೇತ್ರ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಮರಕ್ಕೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ಮಹತ್ವದ ಸಭೆ ನಡೆಸಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಜಮಖಂಡಿ, ಮಂಡ್ಯ,ರಾಮನಗರ ಜಿಲ್ಲೆಗಳ ಪಕ್ಷದ ಮುಖಂಡರ ಜೊತೆ ಚರ್ಚೆ ನಡೆಸಲಾಯಿತು.

ಇಂದು ಮಹಾಲಯ ಅಮಾವಾಸ್ಯೆ ಇದ್ದ ಕಾರಣ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬುಧವಾರ ಪಕ್ಷದ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಲು ಸಭೆಯಲ್ಲಿ ತೀರ್ಮಾನವಾಗಿದೆ.

ಈಗಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿದೆ. ಉಳಿದಿರುವ ಮಂಡ್ಯ, ಬಳ್ಳಾರಿ ಲೋಕಸಭೆ ಮತ್ತು ರಾಮನಗರ , ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ಸ್ಥಳೀಯ ನಾಯಕರ ಅಭಿಪ್ರಾಯವನ್ನು ಯಡಿಯೂರಪ್ಪ ಪಡೆದಿದ್ದಾರೆ.

ಎನ್.ವೈ.ಹನುಮಂತಪ್ಪ ಪುತ್ರನಿಗೆ ಟಿಕೆಟ್:
ಗಣಿ ಜಿಲ್ಲೆ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ವೈ. ಹನುಮಂತಪ್ಪನವರ ಪುತ್ರ ಸುಜಯ್ ಕುಮಾರ್‍ಗೆ ಟಿಕೆಟ್ ನೀಡುವ ಬಗ್ಗೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.

ಮಾಜಿ ಸಚಿವ ಜನಾರ್ಧನ ರೆಡ್ಡಿ , ಶಾಸಕ ಶ್ರೀರಾಮುಲು ಅವರ ರಾಜಕೀಯ ಗುರುಗಳೆಂದೇ ಎನ್.ವೈ.ಹನುಮಂತಪ್ಪ ಗುರುತಿಸಿಕೊಂಡಿದ್ದಾರೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅವರ ಸಹೋದರ ಎನ್.ವೈ.ಗೋಪಾಲ ಕೃಷ್ಣ ಅವರನ್ನು ಬಿಜೆಪಿಗೆ ಕರೆತಂದು ಕೂಡ್ಲಗಿ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಲಾಗಿತ್ತು.

ಈಗ ತಮ್ಮ ರಾಜಕೀಯ ಗುರುವಿನ ಗುರುದಕ್ಷಿಣೆಯನ್ನು ತೀರಿಸಲು ಮುಂದಾಗಿರುವ ರೆಡ್ಡಿ ಮತ್ತು ಶ್ರೀರಾಮುಲು ಅವರ ಪುತ್ರ ಸುಜಯ್ ಕುಮಾರ್‍ನನ್ನು ರಾಜಕೀಯಕ್ಕೆ ಕರೆತಂದು ಬಳ್ಳಾರಿಯಿಂದ ಟಿಕೆಟ್ ನೀಡಲು ಮುಂದಾಗಿದ್ದಾರೆ.
ಇದರ ಜೊತೆಗೆ ಶ್ರೀರಾಮುಲು ಸಹೋದರಿ ಜೆ.ಶಾಂತ, ಸಹೋದರಿಯ ಮಗ ಮಾಜಿ ಶಾಸಕ ಸುರೇಶ್ ಬಾಬು, ಮಾಜಿ ಸಂಸದ ಸಣ್ಣ ಫಕೀರಪ್ಪ ಹೆಸರುಗಳು ಚಾಲ್ತಿಯಲ್ಲಿವೆಯಾದರೂ ಅಂತಿಮವಾಗಿ ಸುಜಯ್ ಕುಮಾರ್ ಹೆಸರನ್ನೇ ವರಿಷ್ಠರು ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷ ಮೂಲಗಳು ತಿಳಿಸಿವೆ.

ಅಶೋಕ್‍ಗೆ ಒತ್ತಡ:
ಇನ್ನು ಸಕ್ಕರೆ ಜಿಲ್ಲೆ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಮುಖಂಡ ಒಕ್ಕಲಿಗ ಸಮುದಾಯದ ನಾಯಕ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುವಂತೆ ಪಕ್ಷದಲ್ಲೇ ಒತ್ತಡ ಹೆಚ್ಚಾಗಿದೆ.
ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಮಧ್ಯಕರ್ನಾಟಕ ಭಾಗದಲ್ಲಿ ಪಕ್ಷಕ್ಕೆ ಭದ್ರ ನೆಲೆ ಇರುವುದರಿಂದ ದಕ್ಷಿಣ ಕರ್ನಾಟಕದಲ್ಲೂ ಪಕ್ಷವನ್ನು ಸಂಘಟಿಸಬೇಕಾದರೆ ಮಂಡ್ಯದಿಂದ ಅಶೋಕ್ ಅವರನ್ನೇ ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ.
ಮಂಡ್ಯದಲ್ಲಿ ಒಕ್ಕಲಿಗ ಸಮುದಾಯ ಪ್ರಬಲವಾಗಿರುವುದರಿಂದ ಅದೇ ಸಮುದಾಯಕ್ಕೆ ಸೇರಿದ ಅಶೋಕ್ ಕಣಕ್ಕಿಳಿದರೆ ಜೆಡಿಎಸ್‍ಗೆ ಪ್ರಬಲ ಸ್ಪರ್ಧೆ ನೀಡಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಇನ್ನು ಒಕ್ಕಲಿಗರ ಸಂಘದ ನಿರ್ದೇಶಕ, ಪರಿಸರ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಶಿವಲಿಂಗಯ್ಯ ಅವರ ಹೆಸರು ಕೂಡ ಕೇಳಿಬಂದಿದೆ.
ವಿಧಾನಸಭೆ ಹುರಿಯಾಳು ಯಾರು:
ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಬಿಜೆಪಿ ದೋಸ್ತಿ ಪಕ್ಷಿಗಳಿಗೆ ಸ್ಪರ್ಧೆವೊಡ್ಡುವಂತಹ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಲು ತೀರ್ಮಾನಿಸಿದೆ.

ರಾಮನಗರದಿಂದ ಜಿಲ್ಲಾಧ್ಯಕ್ಷ ರುದ್ರೇಶ್, ಮುಖಂಡ ವೇಣುಗೋಪಾಲ್, ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪನವರ ಪುತ್ರ ಚಂದ್ರಶೇಖರ್ ಹೆಸರುಗಳು ಪರಿಶೀಲನೆಯಲ್ಲಿವೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ಶಾಸಕ ಮುರುಗೇಶ್ ನಿರಾಣಿ ಸಹೋದರ ಸಂಗಮೇಶ್ ನಿರಾಣಿ ಹಾಗೂ ಸ್ಥಳೀಯ ಉದ್ಯಮಿಯೊಬ್ಬರ ಹೆಸರು ಕೂಡ ಕೇಳಿಬಂದಿದೆ.

ಶ್ರೀಕಾಂತ್ ಕುಲಕರ್ಣಿ ಮತ್ತು ಮುರುಗೇಶ್ ನಿರಾಣಿ ನಡುವೆ ಟಿಕೆಟ್ ಪಡೆಯಲು ಬಿರುಸಿನ ಸ್ಪರ್ಧೆ ಇರುವುದರಿಂದ ಇಬ್ಬರ ನಡುವೆ ಸಂಧಾನ ನಡೆಸಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಯಡಿಯೂರಪ್ಪ ಮುಂದಾಗಿದ್ದಾರೆ.

ಒಂದೆರಡು ದಿನಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದ್ದು, ಕೇಂದ್ರ ವರಿಷ್ಠರಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆ ಹುರಿಯಾಳುಗಳ ಹೆಸರು ಪ್ರಕಟವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ