ಸಂಪುಟ ವಿಸ್ತರಣೆ ಕಗ್ಗಂಟು: ಕಾಂಗ್ರೆಸ್​​-ಜೆಡಿಎಸ್​​ ನಾಯಕರಲ್ಲಿ ಭಿನ್ನಮತ, ಗಂಟೆಗಟ್ಟಲೇ ಚರ್ಚೆ..!

ಬೆಂಗಳೂರುಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರಕ್ಕೆ ಮತ್ತೆ ಸಚಿವ ಸಂಪುಟ ವಿಸ್ತರಣೆ ವಿಚಾರ ಕಗ್ಗಂಟಾಗಿದೆ. ನಿರೀಕ್ಷೆಯಂತೆ ಅಕ್ಟೋಬರ್​​​ 10ರಂದು ವಿಸ್ತರಣೆಯಾಗಬೇಕಿದ್ದ ಸಚಿವ ಸಂಪುಟ ಮುಂದೂಡುವ ಸಾಧ್ಯತೆಯಿದೆ. ಹೀಗಾಗಿ ಎರಡು ಮಿತ್ರ ಪಕ್ಷಗಳಲ್ಲಿಯೂ ಸಂಪುಟ ವಿಸ್ತರಣೆ ವಿಚಾರವಾಗಿ ಭಾರೀ ಭಿನ್ನಮತ ಭುಗಿಲೆದ್ದಿದೆ.
ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಲ್ಲಿ ಭಿನ್ನಮತ ಮೂಡಿದೆ. ಒಂದೆಡೆ ತೆನೆ ನಾಯಕರು ಸಂಪುಟ ವಿಸ್ತರಣೆ ಆಗಲೇಬೇಕು ಎನ್ನುತ್ತಿದ್ದರೆ, ಇನ್ನೊಂದೆಡೆ ಕೈ ಪಾಳೆಯದ ನಾಯಕರು ಮಾತ್ರ ಸದ್ಯಕ್ಕೆ ಬೇಡ ಎಂದಿದ್ದಾರೆ. ಸಂಪುಟ ವಿಸ್ತರಣೆಯಾದರೆ ಮಾತ್ರ ಸರ್ಕಾರ ಸುಭದ್ರ ಎನ್ನುವುದು ಜೆಡಿಎಸ್ ವಾದವಾದರೆ, ಭಿನ್ನಮತ ಸ್ಫೋಟಗೊಳ್ಳುತ್ತದೆ ಎಂಬುದು ಕಾಂಗ್ರೆಸ್ ವಾದವಾಗಿದೆ.
ಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್​​ನಲ್ಲಿ ಬಂಡಾವೇಳುವ ಎಲ್ಲಾ ಸಾಧ್ಯತೆಗಳು ಕಾಣುತ್ತಿವೆ. ಆದರಿಂದ, ಸಂಪುಟ ವಿಸ್ತರಣೆ ಮುಂದೂಡಬೇಕು ಎನ್ನುತ್ತಿದ್ದಾರೆ ಕಾಂಗ್ರೆಸ್​​ ನಾಯಕರು. ಎರಡು ಪಕ್ಷಗಳ ನಾಯಕರ ನಡುವೇ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಈ ಸಂಬಂಧ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೆ.ಸಿ. ವೆಣುಗೋಪಾಲ್ ಅವರು ದೆಹಲಿಯಲ್ಲಿ ಭಾರೀ ಗಂಭೀರ ಚರ್ಚೆ ನಡೆಸಿದ್ದಾರೆ.
ನಿನ್ನೆ ಗಂಟೆಗಟ್ಟಲೇ ಮಾತುಕತೆ ನಡೆಸಿರುವ ಇಬ್ಬರು ನಾಯಕರು, ಒಂದೆರಡು ದಿನಗಳಲ್ಲಿ ವಿಧಾನಸಭೆ, ಲೋಕಸಭೆ ಉಪಚುನಾವಣೆಯ ದಿನಾಂಕ ಘೋಷಣೆಯಾಗಲಿದೆ. ಈ ವೇಳೆ ನಿರೀಕ್ಷೇಯಂತೆ ಸಂಪುಟ ವಿಸ್ತರಣೆಯಾದರೆ, ಅತೃಪ್ತರು ಬಂಡಾಯವೇಳುವ ಸಾಧ್ಯತೆಯಿದೆ. ಈ ಕಾರಣಕ್ಕಾದರೂ ಸಂಪುಟ ವಿಸ್ತರಣೆ ಮುಂದೂಡಬೇಕು ಎಂದು ಚರ್ಚಿಸಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಸೇರಲೇಬೇಕೆಂಬ ಹಠಕ್ಕೆ ಬಿದ್ದು, ಜಿಲ್ಲೆಯಿಂದ ರಾಷ್ಟ್ರಮಟ್ಟದವರೆಗೂ ಶಾಸಕರು ಲಾಬಿ ನಡೆಸುತ್ತಿದ್ದಾರೆ. ಕೆಲವು ಆಕಾಂಕ್ಷಿಗಳಿಗೆ ಸಂಪುಟ ವಿಸ್ತರಣೆಯಲ್ಲಿ ನಿರಾಸೆಯಾಗ ಬಹುದೆಂಬ ಲೆಕ್ಕಾಚಾರಗಳು ಕೇಳಿ ಬರುತ್ತಿವೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಮ್ಮಿಶ್ರ ಸರ್ಕಾರದ ನಾಯಕರಲ್ಲೇ ಗೊಂದಲಗಳಿದ್ದು, ಮತ್ತೆ ಮುಂದೂಡುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ ಪಾಳಯದಿಂದ ಹೆಚ್ಚು ಸ್ಥಾನಗಳು ಭರ್ತಿಯಾಗಬೇಕಿದೆ. ಜೆಡಿಎಸ್‍ನಲ್ಲಿ ಕೇವಲ ಒಂದು ಸ್ಥಾನ ಬಾಕಿ ಇದೆ. ಕಾಂಗ್ರೆಸ್​​ ಪಾಲಿನ ಆರು ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯ ನಾಯಕರು ಗಂಭೀರ ಪ್ರಯತ್ನವನ್ನೇ ಮಾಡುತ್ತಿಲ್ಲ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಸಂಪುಟ ವಿಸ್ತರಣೆಯಾಗಲಿದೆಯೇ ಇಲ್ಲವೇ ಎಂಬ ಗೊಂದಲಗಳು ತೀವ್ರವಾಗಿದೆ ಎನ್ನುತ್ತಿದ್ದಾರೆ ಜೆಡಿಎಸ್​​ ವಕ್ತಾರರು.
ಉಪಚುನಾವಣೆ ನಡೆಯುವುದಾದರೆ ಸದ್ಯದಲ್ಲೇ ದಿನಾಂಕ ನಿಗದಿಯಾಗಲಿದೆ. ಡಿಸೆಂಬರ್ ನಂತರ ಲೋಕಸಭೆ ಚುನಾವಣೆ ಎದುರಾಗಲಿದೆ. ಅಲ್ಲಿಗೆ ಮುಂದಿನ ಮೇ ತಿಂಗಳಿನವರೆಗೂ ಸಂಪುಟ ವಿಸ್ತರಣೆ ಮಾಡಬಾರದು. ಸಂಪುಟ ವಿಸ್ತರಣೆ ಮಾಡಿದರೆ ಬಂಡಾಯದ ಬಿಸಿಯ ತಲೆ ನೋವು ಎದುರಾಗುತ್ತದೆ. ಹೀಗಾಗಿ ಸಂಪುಟ ವಿಸ್ತರಣೆ ಮಾಡಿ ಕಾಲಹರಣ ಮಾಡುವುದು ಬೇಡ ಎಂಬುದು ಕಾಂಗ್ರೆಸ್ ಲೆಕ್ಕಾಚಾರ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ