ಬೆಂಗಳೂರು: ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಮುಗಿದಿದ್ದರೂ ಲೋಕೋಪಯೋಗಿ ಇಲಾಖೆಯಲ್ಲಿ ಮಾತ್ರ ವರ್ಗಾವಣೆ ನಿಲ್ಲುತ್ತಿಲ್ಲ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಹೆಚ್.ಡಿ ರೇವಣ್ಣ ರಾತ್ರೋರಾತ್ರಿ 700 ಅಧಿಕಾರಿಗಳು ಮತ್ತು ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಿ ಸುದ್ದಿಯಲ್ಲಿದ್ದಾರೆ.
ಎಂಜಿನಿಯರ್ಗಳಿಂದ ಹಿಡಿದು, ಪ್ರಥಮ ದರ್ಜೆ ಸಹಾಯಕರವರೆಗಿನ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಸಚಿವ ರೇವಣ್ಣನವರ ಶಿಫಾರಸು ಮೇರೆಗೆ ನೌಕರರನ್ನು ವರ್ಗಾವಣೆಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಏಕಕಾಲದಲ್ಲಿ 700 ನೌಕರರ ವರ್ಗಾವಣೆ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಸರ್ಕಾರ ವಿಶೇಷ ಪ್ರಕರಣಗಳನ್ನು ಹೊರತುಪಡಿಸಿ, ಆರ್ಥಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ಮಾಡುವಂತಿಲ್ಲ. ವರ್ಗಾವಣೆಗೆ ನಿರ್ಬಂಧದ ನಡುವೆಯೂ ಲೋಕೋಪಯೋಗಿ ಇಲಾಖೆ ಒಂದರಲ್ಲೇ ಇಷ್ಟು ನೌಕರರನ್ನು ವರ್ಗಾವಣೆ ಮಾಡಿರುವುದು ಕಾನೂನುಬಾಹಿರ ಎನ್ನಲಾಗಿದೆ.
191 ಸಹಾಯಕ, 150 ಜೂನಿಯರ್ , 200 ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ಸ್ ಸೇರಿದಂತೆ 20 ಕಾರ್ಯ ನಿರ್ವಾಹಕ ಎಂಜಿನಿಯರ್ ಹಾಗೂ 10 ಅಧೀಕ್ಷಕ ಎಂಜಿನಿಯರ್ಗಳು ಒಟ್ಟು 700ಕ್ಕೂ ಹೆಚ್ಚು ನೌಕರರ ವರ್ಗಾವಣೆಯಾಗಿದೆ. ಇವರಲ್ಲಿ ಕೆಲ ಅಧಿಕಾರಿಗಳು ಬೇರೆ ಇಲಾಖೆ ವ್ಯಾಪ್ತಿಗೂ ಬರಲಿದ್ದಾರೆ ಎನ್ನಲಾಗುತ್ತಿದೆ.
ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಕೆಲ ಅಧಿಕಾರಿಗಳನ್ನು ಯಾವ ಇಲಾಖೆಯ ಸಚಿವರ ಗಮನಕ್ಕೂ ಬಾರದೆ ವರ್ಗಾವಣೆ ಮಾಡಲಾಗಿದೆ. ಸಚಿವ ರೇವಣ್ಣ ನೀಡಿದ ಪಟ್ಟಿಗೆ ಸಿಎಂ ಅನುಮೋದನೆ ನೀಡಿದ್ದಾರೆ. ಅಲ್ಲದೇ ಸಿಎಂ ಅನುಮೋದನೆ ಮೇರೆಗೆ ಅಷ್ಟೂ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ವಿಚಾರ ಮೈತ್ರಿ ಸರ್ಕಾರದಲ್ಲಿ ಮತ್ತೆ ವಿವಾದಕ್ಕೆ ಕಾರಣವಾಗಿದೆ. ಹೆಚ್.ಡಿ ರೇವಣ್ಣ ವಿರುದ್ಧ ಸಚಿವರಾದ, ಡಿಕೆಶಿ, ಕೃಷ್ಣ ಭೈರೇಗೌಡ, ಯು.ಟಿ ಖಾದರ್ ಗರಂ ಆಗುವ ಸಾಧ್ಯತೆಯಿದೆ. ವರ್ಗಾವಣೆಯಲ್ಲಿ ರೇವಣ್ಣ ಹಸ್ತಕ್ಷೇಪದ ಬಗ್ಗೆ ಆರೋಪವಿತ್ತು. ಇದೀಗ ಬಿಜೆಪಿಯವರು ಹೇಳಿದಂತೆ ರೇವಣ್ಣನೇ ಮೈತ್ರಿ ಸರ್ಕಾರದಲ್ಲಿ ಸೂಪರ್ ಸಿಎಂ ಎಂಬ ಟೀಕೆಗೆ ಪುಷ್ಟಿ ನೀಡಿದಂತಾಗಿದೆ.