ಸಚಿವ ಸಂಪುಟ ವಿಸ್ತರಣೆ ಸರ್ಕಸ್: ಯಾರಿಗೆ ಮಣೆ ಹಾಕಲಿದೆ ಕಾಂಗ್ರೆಸ್​​​ ಹೈಕಮಾಂಡ್​​? ಇಲ್ಲಿದೆ ಸಚಿವಾಕಾಂಕ್ಷಿಗಳ ಪಟ್ಟಿ..

ಬೆಂಗಳೂರುಕಾಂಗ್ರೆಸ್​​-ಜೆಡಿಎಸ್​​​ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಸರ್ಕಸ್ ಜೋರಾಗಿ ನಡೆಯುತ್ತಿದೆ. ಅಕ್ಟೋಬರ್ 10 ರೊಳಗೆ ಸಂಪುಟ ವಿಸ್ತರಣೆ ಮಾಡುವ ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ನಾಳೆ ಹೈಕಮಾಂಡ್ ಜೊತೆ ಚರ್ಚಿಸಲಿದ್ದಾರಂತೆ. ಹೀಗಾಗಿ, ಎಐಸಿಸಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ನಾಳೆ ನಾಗಪುರಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ನಾಗ್ಪುರದ ಬಳಿಯ ವಾರ್ದಾದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಸಲಾಗುತ್ತಿದೆ. ಕಾರ್ಯಕಾರಿಣಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಹಾಗೂ ದಿನಾಂಕ ನಿಗಧಿಪಡಿಸುವ ಸಾಧ್ಯತೆಯಿದೆ. ಇಲ್ಲಿ ರಾಜ್ಯ ಕಾಂಗ್ರೆಸ್​​ನ ಯಾವ ನಾಯಕರಿಗೆ ಸಚಿವ ಸ್ಥಾನ ನೀಡಬೇಕೆಂಬುದರ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪಿಸಲಿದ್ದಾರೆ ಎನ್ನುತ್ತಿವೆ ಮೂಲಗಳು.
ಈಗಾಗಲೇ ಸಂಪುಟಕ್ಕೆ ಸೇರುವವರ ಪಟ್ಟಿ ಮಾಡಿರುವ ಕಾಂಗ್ರೆಸ್, ಜಾತಿ, ಪ್ರಭಾವ, ಪ್ರಾದೇಶಿಕತೆಯ ಲೆಕ್ಕಚಾರ ಹಾಕಿದೆ. ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ವಿಸ್ತರಣೆ ಮಾಡುತ್ತಿದ್ದು, ಲಿಂಗಾಯತ, ಒಕ್ಕಲಿಗ/ರೆಡ್ಡಿ, ಎಸ್ಟಿ, ಎಸ್ಸಿ, ಕುರುಬ ಸಮುದಾಯಕ್ಕೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್​​ ಪಾಲಿನ ಆರು ಸಚಿವ ಸ್ಥಾನಕ್ಕೆ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಲಿಂಗಾಯತ ಸಮುದಾಯದಿಂದ ಎಂ.ಬಿ ಪಾಟೀಲ್, ಶಾಮನೂರು ಶಿವಶಂಕರಪ್ಪ, ಬಿ ಸಿ ಪಾಟೀಲ್,  ಸಂಗಮೇಶ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ
ರೆಡ್ಡಿ ಸಮುದಾಯದಿಂದ ರಾಮಲಿಂಗಾರೆಡ್ಡಿ, ಒಕ್ಕಲಿಗ ಸಮುದಾಯಕ್ಕೆ ಸೇರಿದ ನರೇಂದ್ರ ಅವರು ಕೂಡ ಪಟ್ಟಿಯಲಿದ್ಧಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರುಬ ಸಮುದಾಯಕ್ಕೆ ಸೇರಿದ ಇಬ್ಬರು ನಾಯಕರು ಸಿ ಎಸ್ ಶಿವಳ್ಳಿ ಮತ್ತು ಎಂಟಿಬಿ ನಾಗರಾಜ್, ವಾಲ್ಮೀಕಿ ನಾಯಕ ಸಮುದಾಯದ ಇ ತುಕಾರಾಂ, ರಘುಮೂರ್ತಿ,  ದಲಿತ ಎಡಗೈ ಸಮುದಾಯದ ನಾಯಕ ರೂಪ ಶಶಿಧರ ಕೂಡ ಸಚಿವಾಕಾಂಕ್ಷಿಗಳ ಪಟ್ಟಿಯಲ್ಲಿದ್ಧಾರೆ. ಹಾಗಾಗಿ ಓದಿದಷ್ಟು ಪಟ್ಟಿ ಬೆಳೆಯುತ್ತಲೇ ಹೋಗುತ್ತಿದ್ದು, ಕಾಂಗ್ರೆಸ್​​ ಪಾಲಿಗೆ ತಲೆನೋವಾಗಿ ಪಟ್ಟಿ ಪರಿಣಮಿಸಿದೆ.
ಈ ಸಂಬಂಧ ನಡೆಯುತ್ತಿರುವ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕೂಡ ಪ್ರಯಾಣ ಬೆಳೆಸಿದ್ದಾರೆ. ಅಕ್ಟೋಬರ್ 10 ರೊಳಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅಂಕಿತ ಹಾಕುವ ಸಾಧ್ಯತೆಯಿದೆ. ಸದ್ಯ ಕಾಂಗ್ರೆಸ್​​ ಪಾಲಿನ ಆರು ಸ್ಥಾನಗಳನ್ನು ಯಾರ ಮಡಲಿಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇನ್ನು ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳಿವು ನೀಡಿದ ಬೆನ್ನಲ್ಲೇ ಕಾಂಗ್ರೆಸ್​​ ಶಾಸಕರು ದೆಹಲಿಗೆ ದೌಡಾಯಿಸಿದ್ದರು ಎನ್ನಲಾಗಿತ್ತು. ಕಾಂಗ್ರೆಸ್​ಗೆ ಸೇರಿದ ಸಚಿವ ಸ್ಥಾನಗಳಿಗೆ ಈಗಾಗಲೇ ಲಾಬಿ ಜೋರಾಗಿದೆ. ಹೈಕಮಾಂಡ್​ ಯಾರಿಗೆ ಮಣೆ ಹಾಕಲಿದೆ ಎಂಬುದು ಸದ್ಯಕ್ಕೆ ಕುತೂಹಲಕಾರಿ ಸಂಗತಿ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ