ಕೆ.ಆರ್.ಮಾರುಕಟ್ಟೆಗೆ ನೂತನ ಮೇಯರ್ ಭೇಟಿ: ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ

ಬೆಂಗಳೂರು, ಸೆ.29- ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ದಿನದಿಂದಲೇ ಕರ್ತವ್ಯಕ್ಕೆ ಹಾಜರಾಗಿ ಜನಮಾನಸ ಗೆದ್ದ ನೂತನ ಮೇಯರ್ ಗಂಗಾಂಬಿಕೆ, ಎರಡನೆ ದಿನವಾದ ಇಂದು ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಿನ್ನೆ ಅಧಿಕಾರ ವಹಿಸಿಕೊಂಡ ಗಂಗಾಂಬಿಕೆ ಸಂಜೆ ನಿಯಂತ್ರಣ ಕೊಠಡಿಯಲ್ಲಿ ಕುಳಿತು ಮಳೆ ಅನಾಹುತಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಮಳೆ ಅನಾಹುತ ಪ್ರದೇಶಗಳಿಗೆ ತೆರಳುವಂತೆ ಆದೇಶಿಸಿದ್ದರು.
ಇಂದು ಬೆಳಗ್ಗೆ ಉಪಮೇಯರ್ ರಮಿಳಾ ಉಮಾಶಂಕರ್, ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಜೆಡಿಎಸ್ ಪಕ್ಷದ ನಾಯಕಿ ನೇತ್ರಾನಾರಾಯಣ್ ಹಾಗೂ ಅಧಿಕಾರಿಗಳೊಂದಿಗೆ ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಎಲ್ಲಾ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಕವರ್ ಮಾರುತ್ತಿದುದ್ದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾರುಕಟ್ಟೆಯಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಿ ಹಣ್ಣು, ತರಕಾರಿ, ಹೂ ಉಳಿದದ್ದನ್ನು ಅಲ್ಲೆ ಬಿಸಾಡದೆ ಒಂದೆಡೆ ಸಂಗ್ರಹಿಸುವಂತೆ ಸೂಚಿಸಿದರು.
ಫುಟ್‍ಪಾತ್ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಿದ್ದ ಅಂಗಡಿಯವರಿಗೆ ಕೂಡಲೇ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಸಹಕರಿಸಬೇಕೆಂದು ತಿಳಿ ಹೇಳಿದರು.
ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಕವರ್‍ಗಳನ್ನು ಬಳಕೆ ಮಾಡಬಾರದು ಎಂದು ವ್ಯಾಪಾರಿಗಳಲ್ಲಿ ಮನವಿ ಮಾಡಿದರಲ್ಲದೆ, ಗ್ರಾಹಕರಿಗೂ ಬಟ್ಟೆ ಬ್ಯಾಗ್‍ಗಳನ್ನೇ ತರುವಂತೆ ಸೂಚಿಸಿದರು.
ಮಾರುಕಟ್ಟೆಯಲ್ಲಿ ಸ್ವಚ್ಛತೆ ಕಾಪಾಡಬೇಕು, ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅಧಿಕಾರಿಗಳಿಗೆ ಈ ವೇಳೆ ಮೇಯರ್ ತಾಕೀತು ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ