ಶಿರಾಡಿಘಾಟ್ ಬಳಿಯ ರಸ್ತೆ ಕಾಮಗಾರಿ ಕಳಪೆ: ಸೂಕ್ತ ತನಿಖೆಗೆ ನೀತಿ ತಂಡ ಒತ್ತಾಯ

Varta Mitra News

ಬೆಂಗಳೂರು, ಸೆ.29- ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿಘಾಟ್ ಬಳಿ ನಡೆದಿರುವ 13 ಕಿ.ಮೀ. ಉದ್ದದ ಕಾಮಗಾರಿ ಕಳಪೆಯಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೀತಿ ತಂಡ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ನೀತಿ ತಂಡ ಅಧ್ಯಕ್ಷ ಟಿ.ಜಯಂತ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಎನ್‍ಎಚ್ 75(48) ಪಶ್ಚಿಮಘಟ್ಟಗಳ ಮೂಲಕ ಮಂಗಳೂರು-ಬೆಂಗಳೂರು ಸಂಪರ್ಕ ಕಲ್ಪಿಸುವ ರಸ್ತೆ ಹೆದ್ದಾರಿಯಾಗಿದೆ.

ಶಿರಾಡಿಘಾಟ್ ಪ್ರದೇಶದಲ್ಲಿ ಮಳೆಗಾಲದಿಂದ ಉಂಟಾಗುವ ರಸ್ತೆ ಗುಂಡಿಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 15 ಕಿ.ಮೀ.ವರೆಗೆ 86 ಕೋಟಿ ವೆಚ್ಚದಲ್ಲಿ ಸಿಮೆಂಟ್ ರಸ್ತೆ ಮಾಡಲಾಗಿದೆ. ಆದರೆ, ಈ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಆರೋಪಿಸಿದರು.
ಈ ರಸ್ತೆ ಕಾಮಗಾರಿಗಾಗಿ ಹೆಚ್ಚುವರಿ ಮೊತ್ತ ಸೇರಿಸಿ 101 ಕೋಟಿ ನೀಡಲಾಗಿದೆ. ಆದರೆ, ಕಾಮಗಾರಿ ಪೂರ್ಣಗೊಂಡ ನಂತರ ಪರಿಶೀಲಿಸಿದಾಗ ಇದು ಕಳಪೆಯಾಗಿರುವುದು ಕಂಡು ಬಂದಿದೆ.

ಕಾಮಗಾರಿ ಪೂರ್ಣಗೊಂಡ 15 ದಿನದೊಳಗೆ ರಸ್ತೆಯ ಹತ್ತು ಕಡೆ ತಡೆಗೋಡೆಗಳು ಕುಸಿದು ಬಿದ್ದಿವೆ. ಆದರೆ, ಇದನ್ನು ಪ್ರಕೃತಿ ವಿಕೋಪ ಎಂದು ಬಿಂಬಿಸಿ ದುರಸ್ಥಿಗಾಗಿ 60 ಕೋಟಿ ವೆಚ್ಚವಾಗುತ್ತದೆ ಎಂದು ಅಧಿಕಾರಿಗಳು ವರದಿ ತಯಾರು ಮಾಡಿ ಪ್ರಕೃತಿಯ ಹೆಸರಲ್ಲಿ ಹಣ ಲೂಟಿ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹೆದ್ದಾರಿ ಕಾಮಗಾರಿ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಯಂತ್ ಒತ್ತಾಯಿಸಿದರು. ತಂಡದ ಸದಸ್ಯರಾದ ಲಕ್ಷ್ಮೀಶ್, ಸುರೇಶ್, ರವೀಂದ್ರ ಹಾಗೂ ಸುಜಿತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ