ಬೆಂಗಳೂರು, ಸೆ.22-ಎಸ್ಸಿ-ಎಸ್ಟಿ ಬಡ್ತಿ ಮೀಸಲಾತಿ ಜಾರಿಯಾಗಲೇಬೇಕು. ಇದು ನಮ್ಮ ಬದ್ಧತೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಬಿಲ್ ಜಾರಿ ಸಂಬಂಧ ಸಂಪುಟ ಸಭೆಯಲ್ಲಿ ಆಗ್ರಹಪಡಿಸಿದ್ದರ ಬಗ್ಗೆ ಬಹಿರಂಗವಾಗಿ ನಾನು ಏನನ್ನೂ ಮಾತನಾಡುವುದಿಲ್ಲ. ಆದರೆ ಇದು ಜಾರಿಯಾಗಬೇಕು ಎಂಬ ಆಶಯ ನಮ್ಮದು. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಜಾರಿ ಮಾಡುವ ವಿಶ್ವಾಸ ನಮಗಿದೆ ಎಂದರು.
ವಿಚಾರ ಸುಪ್ರೀಂಕೋರ್ಟ್ ಮುಂದಿರುವುದರಿಂದ ಸ್ವಲ್ಪ ವಿಳಂಬವಾಗಬಹುದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಡೆಯೊಡ್ಡುತ್ತಿದ್ದಾರೆ ಎನ್ನುವುದು ಸುಳ್ಳು. ನಮಗೆ ಈ ವಿಚಾರದಲ್ಲಿ ಬದ್ಧತೆ ಇದೆ. ನಾವು ಜಾರಿ ಮಾಡುತ್ತೇವೆ ಎಂದು ಹೇಳಿದರು.
ದೊಡ್ಡ ಅವ್ಯವಹಾರ:
ರಫೇಲ್ ಯುದ್ಧ ವಿಮಾನ ಖರೀದಿ ಕೇಂದ್ರದ ದೊಡ್ಡ ಅವ್ಯವಹಾರ. ಇದಲ್ಲದೆ, ಕೇಂದ್ರದ ಎಲ್ಲಾ ಯೋಜನೆಗಳಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಬೋಫರ್ಸ್ ಹಗರಣ ಒಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ಇದನ್ನೇ ದೊಡ್ಡದು ಮಾಡಿ ತನಿಖೆ ಮಾಡಿಸಿದರು. ಈಗ ರಫೇಲ್ ಡೀಲ್ ದೊಡ್ಡ ಅವ್ಯವಹಾರ ಬಹಿರಂಗವಾಗಿದೆ. ಸ್ವತಃ ಫ್ರಾನ್ಸ್ನ ಮಾಜಿ ಅಧ್ಯಕ್ಷರೇ ಇದರ ಮೇಲೆ ಬೆಳಕು ಚೆಲ್ಲಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ದೊಡ್ಡ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದರು.