ಸೆ.25ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಪರೇಷನ್ ಕಮಲದ ಅಸಲೀ ಬಂಡವಾಳ ಬಯಲು

ಬೆಂಗಳೂರು, ಸೆ.22-ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಬಂದೊದಗಿರುವ ಕಂಕಟಕದ ಕ್ಲೈಮ್ಯಾಕ್ಸ್ ಸಮೀಪಿಸುತ್ತಿದ್ದು, ಇದೇ 25ರಂದು ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಪರೇಷನ್ ಕಮಲದ ಅಸಲೀ ಬಂಡವಾಳ ಬಯಲಾಗಲಿದೆ.
ವಿಧಾನಸಭೆಯಿಂದ ವಿಧಾನಪರಿಷತ್‍ನ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ಸಲುವಾಗಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.25ರಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.

ಸಭೆಯಲ್ಲಿ ಕಡ್ಡಾಯವಾಗಿ ಎಲ್ಲರೂ ಭಾಗವಹಿಸಬೇಕೆಂಬ ಆಹ್ವಾನ ಪತ್ರದ ಸೂಚನೆ ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಶಾಸಕರಿಗೆ ತಲುಪಿದೆ. ಕಾಂಗ್ರೆಸ್ ಶಾಸಕರು ಎಷ್ಟು ಮಂದಿ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ, ಯಾರೆಲ್ಲಾ ಆಪರೇಷನ್ ಕಮಲಕ್ಕೆ ಬಲಿಯಾಗಿದ್ದಾರೆ, ರೆಸಾರ್ಟ್ ಪ್ರವಾಸದಲ್ಲಿರುವವರು ಯಾರು ಎಂಬೆಲ್ಲ ಗೊಂದಲಗಳಿಗೆ ಶಾಸಕಾಂಗ ಪಕ್ಷದ ಸಭೆ ಉತ್ತರ ಕಂಡುಕೊಳ್ಳಲಿದೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಬೈರತಿ ಸುರೇಶ್ ಅವರು ವಿಧಾನಸಭೆಗೆ ಆಯ್ಕೆಯಾದ ನಂತರ ಅವರಿಂದ ತೆರವಾದ ವಿಧಾನಪರಿಷತ್ತಿನ ಸ್ಥಾನಗಳಿಗೆ ಅ.3ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆ.28 ಕೊನೆ ದಿನವಾಗಿದೆ.
ಈ ಮೊದಲು ವಿಧಾನಪರಿಷತ್ ಚುನಾವಣೆ ನಡೆಯುವ ದಿನ ಶಾಸಕಾಂಗ ಪಕ್ಷದ ಸಭೆ ಕರೆಯುತ್ತಿದ್ದ ಸಿದ್ದರಾಮಯ್ಯ ಅವರು 8 ದಿನ ಮೊದಲೇ ಸಭೆ ಕರೆದಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಎಲ್ಲಾ ಶಾಸಕರ ಅಭಿಪ್ರಾಯ ಪಡೆದು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಿವುದು ಕಾಂಗ್ರೆಸ್‍ನ ಉದ್ದೇಶವಾಗಿದೆ. ಇಲ್ಲವಾದರೆ ಶಾಸಕರು ಅಡ್ಡಮತದಾನ ಮಾಡಿ ಪಕ್ಷಕ್ಕೆ ಟಾಂಗ್ ಕೊಟ್ಟು ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಸೋಲಿಸಿ ಸಮ್ಮಿಶ್ರ ಸರ್ಕಾರಕ್ಕೆ ಮುಖಭಂಗ ಮಾಡುವ ಆತಂಕವಿದೆ.

ಇತ್ತೀಚೆಗೆ ಸಿದ್ದರಾಮಯ್ಯ, ಪರಮೇಶ್ವರ್, ದಿನೇಶ್‍ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಜತೆ ವಿಧಾನಪರಿಷತ್ ಸದಸ್ಯರ ಆಯ್ಕೆ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದಾರೆ.
ಇರುವ ಮೂರು ಸ್ಥಾನಗಳಿಗೆ ನೂರಾರು ಮಂದಿ ಆಕಾಂಕ್ಷಿಗಳಿದ್ದು, ಅವರಿಗೆ ಬಹಳಷ್ಟು ಪ್ರಮುಖ ನಾಯಕರು ಬೆಂಗಾವಾಲಾಗಿದ್ದಾರೆ. ಅದರಲ್ಲೂ ಕಾಂಗ್ರೆಸ್ ಪಾಲಿಗೆ ಕೇವಲ ಎರಡು ಸ್ಥಾನಗಳು ಮಾತ್ರ ಲಭ್ಯವಾಗಲಿದೆ.

ಸ್ವಲ್ಪ ಯಾಮಾರಿದರೂ ಕಾಂಗ್ರೆಸ್ ಶಾಸಕರು ಪಕ್ಷದ ವ್ಹಿಪ್ ಧಿಕ್ಕರಿಸುವ ಸಾಧ್ಯತೆ ಇದೆ. ಹಾಗಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅತ್ಯಂತ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ.
ಇತ್ತೀಚೆಗೆ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾದ ಭಿನ್ನಮತೀಯ ಚಟುವಟಿಕೆಗಳ ನಂತರ ಇದೇ ಮೊದಲ ಬಾರಿಗೆ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಈ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.

ಬಿಜೆಪಿ ಆಪರೇಷನ್ ಕಮಲ ನಡೆಸಲು ಯತ್ನಿಸುತ್ತಿರುವ ಸಂಪೂರ್ಣ ಮಾಹಿತಿ ಕಾಂಗ್ರೆಸ್ ನಾಯಕರ ಬಳಿ ಇದೆ. ಶಾಸಕಾಂಗ ಪಕ್ಷದ ಸಭೆಯ ಆರಂಭದಲ್ಲಿ ಔಪಚಾರಿಕವಾಗಿ ಮಾತುಕತೆ ನಡೆಸಿ ನಂತರ ವಿಧಾನಪರಿಷತ್ ಸದಸ್ಯರ ಆಯ್ಕೆ ಬಗ್ಗೆ ಚರ್ಚೆ ನಡೆಸಲಾಗುತ್ತದೆ.
ಕೊನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಸಚಿವ ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರ ಜತೆ ಪ್ರತ್ಯೇಕವಾಗಿ ರಹಸ್ಯ ಸಭೆ ನಡೆಸಲಿದ್ದಾರೆ.
ಈ ಮೂಲಕ ಬಿಜೆಪಿ ನಾಯಕರು ಆಪರೇಷನ್ ಕಮಲದ ವೇಳೆ ಏನೆಲ್ಲ ಆಮಿಷಗಳನ್ನು ಒಡ್ಡಿದ್ದರು, ಯಾವ ರೀತಿ ಪಕ್ಷಕ್ಕೆ ಸೆಳೆಯುವ ಪ್ರಯತ್ನ ನಡೆಸಿದರೆಂಬ ಸಮಗ್ರ ಮಾಹಿತಿಯನ್ನು ಕಾಂಗ್ರೆಸ್ ನಾಯಕರು ಶಾಸಕರಿಂದ ಕಲೆ ಹಾಕಲಿದ್ದಾರೆ.

ಹಾಸನದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿರುವ ಬೆನ್ನಲ್ಲೇ ಕಾಂಗ್ರೆಸ್ ಕೂಡ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‍ನ ಶಾಸಕರ ಜತೆ ಚರ್ಚೆ ನಡೆಸಿ ಆಪರೇಷನ್ ಕಮಲಕ್ಕೆ ತುತ್ತಾಗದಂತೆ ಸಲಹೆ ನೀಡಲಾಗಿದೆ.
ಈಗ ಕಾಂಗ್ರೆಸ್‍ನ ಸರದಿಯಾಗಿದ್ದು, ಸಭೆಗೆ ಎಷ್ಟು ಮಂದಿ ಶಾಸಕರು ಭಾಗವಹಿಸುತ್ತಾರೆ, ಅಲ್ಲಿ ಅವರು ಹೇಳುವ ಅನಿಸಿಕೆಗಳೇನು ಎಂಬುದು ಅತ್ಯಂತ ಮಹತ್ವ ಪಡೆದುಕೊಂಡಿದೆ.

ಕಾಂಗ್ರೆಸ್‍ನ ಎಲ್ಲಾ ಶಾಸಕರು ಸಭೆಯಲ್ಲಿ ಭಾಗವಹಿಸಿ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡು ಆಂತರಿಕವಾಗಿರುವ ಅಸಮಾಧಾನವನ್ನು ಬಗೆಹರಿಸಿಕೊಂಡರೆ ಬಿಜೆಪಿಯ ಆಪರೇಷನ್ ಕಮಲ ಠುಸ್ ಪಟಾಕಿಯಾಗಲಿದೆ.
ಒಂದು ವೇಳೆ ಶಾಸಕರು ಗೈರು ಹಾಜರಾಗಿ ಕಾಂಗ್ರೆಸ್ ನಾಯಕರ ಮಾತಿಗೆ ಬೆಲೆ ನೀಡದೇ ಇದ್ದರೆ ಸಮ್ಮಿಶ್ರ ಸರ್ಕಾರದ ಭವಿಷ್ಯ ಅತಂತ್ರ ಎಂಬ ವದಂತಿಗಳು ನಿಜವಾಗುತ್ತವೆ.
ಹಾಗಾಗಿ ಸೆ.25ರಂದು ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆಪರೇಷನ್ ಕಮಲದ ಕ್ಲೈಮ್ಯಾಕ್ಸ್ ಆಗಲಿದೆಯೋ, ಇಲ್ಲವೋ ಎಂಬುದನ್ನು ನಿರ್ಧರಿಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ