ಬೆಂಗಳೂರು, ಸೆ.18-ರಾಜ್ಯದಲ್ಲಿ ನಡೆಯುತ್ತಿರುವ ಭಿನ್ನಮತೀಯ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಗದ್ದುಗೆಯ ಆಸೆ ಬಿಜೆಪಿಯಲ್ಲಿ ಮತ್ತೆ ಗರಿಗೆದರಿದೆ.
ಕಾಂಗ್ರೆಸ್-ಜೆಡಿಎಸ್ನ ಹಲವು ಶಾಸಕರು ರಾಜೀನಾಮೆ ನೀಡಿ ರಾಜ್ಯದ ಮೈತ್ರಿ ಸರ್ಕಾರಕ್ಕೆ ಧಕ್ಕೆಯಾಗಲಿದೆ ಎಂಬ ವದಂತಿ ದಟ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್ ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಬಿಜೆಪಿ ತನ್ನ ಸ್ಟಾಟರ್ಜಿಯನ್ನು ಬದಲಿಸಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದೊಂದಿಗೆ ಮತ್ತೊಮ್ಮೆ ಪಾಲಿಕೆಯ ಗದ್ದುಗೆಗೇರುವ ಪ್ಲ್ಯಾನ್ ರೂಪಿಸಿತ್ತು. ಪಕ್ಷೇತರ ಸದಸ್ಯರನ್ನು ಮುಂಬೈ ಅಥವಾ ಹೈದರಾಬಾದ್ಗೆ ಕರೆದೊಯ್ಯಲು ನಿರ್ಧರಿಸಿತ್ತು. ಆದರೆ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದ ಹಿನ್ನೆಲೆಯಲ್ಲಿ ಏಕಾಏಕಿ ಪಕ್ಷೇತರ ಸದಸ್ಯರ ಪ್ರವಾಸ ರದ್ದುಗೊಂಡಿದ್ದು, ಬಿಜೆಪಿಯಲ್ಲಿ ಬಿಬಿಎಂಪಿ ಅಧಿಕಾರದ ಗದ್ದುಗೆಯ ಕನಸು ಚಿಗುರೊಡೆಯತೊಡಗಿದೆ. ಅಕಸ್ಮಾತ್ ಏನಾದರೂ ಶಾಸಕರು ರಾಜೀನಾಮೆ ಕೊಟ್ಟು ಸರ್ಕಾರ ಬಿದ್ದು ಹೋದರೆ ಬಿಬಿಎಂಪಿಯಲ್ಲೂ ಅಲ್ಪ ಮತಕ್ಕೆ ಕುಸಿಯುವ ಸಂಭವವಿರುತ್ತದೆ. ಆಗ ಪಕ್ಷೇತರರ ಸಹಕಾರದೊಂದಿಗೆ ಬಿಜೆಪಿ ಬಿಬಿಎಂಪಿಯಲ್ಲಿ ಅಧಿಕಾರಕ್ಕೇರುವ ಸಾಧ್ಯತೆ ಇದ್ದು ಈ ಲೆಕ್ಕಾಚಾರದಲ್ಲಿ ತೊಡಗಿದೆ. ಹಾಗಾಗಿ ಹೊಸ ಪ್ಲ್ಯಾನ್ನ್ನು ರೂಪಿಸುತ್ತಿದೆ.
ಬಿಬಿಎಂಪಿಯಲ್ಲಿ ಪಾಲಿಕೆ ಸದಸ್ಯರು, ಸಂಸದರು, ಶಾಸಕರೂ ಸೇರಿದಂತೆ 259 ಮತದಾರರಿದ್ದು, ಮೇಯರ್ ಆಯ್ಕೆಗೆ 130 ಮತಗಳ ಅಗತ್ಯವಿದೆ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸೇರಿ 128 ಸದಸ್ಯ ಬಲ ಹೊಂದಿದೆ. ಬಿಜೆಪಿ 123 ಸದಸ್ಯರಿದ್ದಾರೆ. 7 ಜನ ಪಕ್ಷೇತರರು ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ 135ರಷ್ಟಾಗುತ್ತದೆ. ಪಕ್ಷೇತರರು ಬಿಜೆಪಿ ಜೊತೆ ಕೈ ಜೋಡಿಸಿದರೆ 130 ಸಂಖ್ಯಾಬಲವಾಗುತ್ತದೆ.
ಕಾಂಗ್ರೆಸ್-ಜೆಡಿಎಸ್ಗೆ ಪ್ರಸ್ತುತ ಕೇವಲ ಇಬ್ಬರು ಪಕ್ಷೇತರ ಸದಸ್ಯರ ಅಗತ್ಯವಿದೆ. ಆದರೆ ಪ್ರಸ್ತುತ ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಅತೃಪ್ತಗೊಂಡ ನಗರದ ಕೆಲವು ಶಾಸಕರು ರಾಜೀನಾಮೆ ನೀಡಿ ಬಿಬಿಎಂಪಿ ವ್ಯಾಪ್ತಿಯ ಮತದಾರರ ಸಂಖ್ಯಾ ಬಲ ಕ್ಷೀಣಿಸಿದರೆ ವರದಾನವಾಗಬಹುದು ಎಂಬ ಲೆಕ್ಕಾಚಾರ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.
ಕಾಂಗ್ರೆಸ್ ಕೂಡ ಈ ಬೆಳವಣಿಗೆಗಳಿಂದ ಆತಂಕಗೊಂಡಿದ್ದು, ಪಕ್ಷೇತರ ಸದಸ್ಯರ ಪ್ರವಾಸವನ್ನು ದಿಢೀರ್ ರದ್ದುಗೊಳಿಸಿದೆ. ಈ ಹಿಂದೆ ಪಕ್ಷೇತರ ಸದಸ್ಯರನ್ನು ಗೋವಾ ಪ್ರವಾಸಕ್ಕೆ ಕಳುಹಿಸಲು ತೀರ್ಮಾನಿಸಲಾಗಿತ್ತು. ಅದನ್ನು ಕೈ ಬಿಟ್ಟು ಮುಂಬೈ ಅಥವಾ ಹೈದರಾಬಾದ್ಗೆ ಕರೆದೊಯ್ಯಲು ಕಾಂಗ್ರೆಸ್ ಮುಖಂಡರು ಮುಂದಾಗಿದ್ದರು. ಆದರೆ ಇಂದು ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಪ್ರವಾಸವೂ ಕೂಡ ರದ್ದಾಗಿದೆ. ಕ್ಷಣ ಕ್ಷಣದ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಬಿಬಿಎಂಪಿಮೇಯರ್ ಚುನಾವಣೆ ಏನಾಗಲಿದೆ? ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಒಲಿಯದೆಯೋ ಅಥವಾ ಬಿಜೆಪಿ ಪಾಲಾಗಲಿದೆಯೋ ಕಾದು ನೋಡಬೇಕು.