ತೆರಿಗೆ ವಂಚಿಸುತ್ತಿದ್ದ ಉದ್ಯಮಿ ಬಂಧನ

ಬೆಂಗಳೂರು, ಸೆ.18-ಗ್ರಾನೈಟ್ ಉದ್ಯಮದಲ್ಲಿ ಜಿಸ್‍ಟಿ ತೆರಿಗೆ ವಂಚಿಸುತ್ತಿದ್ದ ಬೃಹತ್ ಜಾಲವೊಂದನ್ನು ಭೇದಿಸಿರುವ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು, ಉದ್ಯಮಿಯೊಬ್ಬರನ್ನು ಬಂಧಿಸಿದ್ದಾರೆ.
ಅಂತಾರಾಜ್ಯ ಜಿಎಸ್‍ಟಿ ವಂಚನೆಯ ಮೊದಲ ಪ್ರಕರಣ ಇದಾಗಿದ್ದು, ಜಿಎಸ್‍ಟಿ ಜಾರಿಯ ಬಳಿಕ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ.

ಜಿಗಣಿಯ ನೀಲಕಂಠ ಎಕ್ಸ್‍ಪೆÇೀರ್ಟ್ ಗ್ರಾನೈಟ್ ಸಂಸ್ಥೆಯ ಮಾಲೀಕ ಕುಲದೀಪ್ ಚೌದರಿ ಬಂಧಿತ ಆರೋಪಿ. ಈತನನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಸೂಚನೆ ಮೇರೆಗೆ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ.
ರಾಜ್ಯದಲ್ಲಿ ಜಿಎಸ್‍ಟಿ ಕಾಯ್ದೆ ಜಾರಿಯಾದ ಬಳಿಕ ರಾಜ್ಯ ಸರ್ಕಾರ ಇ-ಸುಗಮ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ವ್ಯವಸ್ಥೆ ಜಾರಿಯಾದ ಬಳಿಕ ತೆರಿಗೆ ವಂಚನೆಗೆ ಕಡಿವಾಣ ಬಿದ್ದಿತ್ತು. ಇದರಿಂದ ಅಕ್ರಮ ವ್ಯವಹಾರ ನಡೆಸುತ್ತಿದ್ದ ಕುಲದೀಪ್ ಚೌದರಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಬೆಂಗಳೂರಿನಲ್ಲಿದ್ದ ತನ್ನ ಎಲ್ಲಾ ಗ್ರಾನೈಟ್ ವ್ಯವಹಾರಗಳನ್ನು ಮುಚ್ಚಿ ಚೆನ್ನೈಗೆ ಪರಾರಿಯಾಗಿದ್ದ. ಅಲ್ಲಿ ಗ್ರಾನೈಟ್ ವ್ಯವಹಾರ ಆರಂಭಿಸಿದ್ದ ಎಂದು ತಿಳಿದುಬಂದಿದೆ.
ಕುಲದೀಪ್ ಚೌದರಿ ನಡೆಸಿದ್ದ ತೆರಿಗೆ ವಂಚನೆ ಬಗ್ಗೆ ಮಾಹಿತಿ ಪಡೆದ ವಾಣಿಜ್ಯ ಇಲಾಖೆಯ ಆಯುಕ್ತರಾದ ಶ್ರೀಕರ್ ಅವರು ದಕ್ಷಿಣ ವಿಭಾಗದ ಅಪರ ಆಯುಕ್ತ ನಿತೀಶ್ ತೀಶ್ ಪಟೇಲ್ ಮುಂದಾಳತ್ವದಲ್ಲಿ ದಕ್ಷಿಣ ಜಾರಿ ವಿಭಾಗದ ಸಹಾಯಕ ಆಯುಕ್ತ ಮುಹಮ್ಮದ್ ರಫೀಕ್ ಪಾಷ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ತಂಡದಲ್ಲಿ ಒಟ್ಟು ಆರು ಜನರಿದ್ದರು.

ಈ ತಂಡ ಚೌದರಿ ನಡೆಸುತ್ತಿದ್ದ ಎಲ್ಲಾ ವ್ಯವಹಾರಗಳ ಬಗ್ಗೆ ಮಾಹಿತಿ ಕಲೆಹಾಕಿತು. ಅವರು ಬಳಸುತ್ತಿದ್ದ ಇಮೇಲ್, ಇಂಟರ್‍ನೆಟ್, ಮೊಬೈಲ್ ಸಂಖ್ಯೆಗಳ ಜಾಡು ಹಿಡಿದು ತನಿಖೆ ನಡೆಸಿದಾಗ ಆತ ಚೆನ್ನೈನಲ್ಲಿ ಇರುವುದು ಪತ್ತೆಯಾಗಿದೆ.
ತಕ್ಷಣ ಈ ತಂಡ ಚೆನ್ನೈನ ಅಧಿಕಾರಿಗಳ ಸಹಾಯ ಪಡೆದು ಆತನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಅಧಿಕಾರಿಗಳು ಉದ್ಯಮಿಯನ್ನು ವಿಚಾರಣೆಗೆ ಒಳಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಜಿಎಸ್‍ಟಿ ಜಾರಿಯಾದ ಬಳಿಕ ಚೌದರಿ, ಕನಿಷ್ಠ 5ರಿಂದ 6 ಕೋಟಿ ರೂ.ತೆರಿಗೆ ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ತೆರಿಗೆ ವಂಚನೆ ಇನ್ನೂ ಹೆಚ್ಚಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಜಿಎಸ್‍ಟಿ ಜಾರಿಯಾದ ಬಳಿಕ ಅಂತಾರಾಜ್ಯ ತೆರಿಗೆ ವಂಚನೆ ಪ್ರಕರಣ ಭೇದಿಸಿರುವುದು ಇದೇ ಮೊದಲ ಪ್ರಕರಣವಾಗಿದೆ. ಇನ್ನು ಮುಂದೆ ಇಂತಹ ತೆರಿಗೆ ವಂಚಿಸುವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಹಮ್ಮದ್ ರಫೀಕ್ ಪಾಷ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ