ಬೆಂಗಳೂರು, ಸೆ.14- ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡುವ ಕುರಿತು ಸಾರ್ವಜನಿಕರಲ್ಲಿ ಈ ಹಿಂದಿನ ಕ್ರೇಜ್ ಇಲ್ಲದಿದ್ದರೂ ನಿನ್ನೆ ನಗರದ ಕೆಲವು ಪ್ರದೇಶಗಳಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲಾಯಿತು.
ರಾಜಾಜಿನಗರ, ವಿಜಯನಗರ, ಸಂಜಯನಗರ, ಯಶವಂತಪುರ, ಮತ್ತಿಕೆರೆ, ನಾಗರಬಾವಿ, ಹೆಬ್ಬಾಳ, ಪದ್ಮನಾಭನಗರ, ಜಯನಗರ ಮತ್ತಿತರ ಪ್ರದೇಶಗಳ ಗಲ್ಲಿ ಗಲ್ಲಿಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಲಂಬೋಧರನ ಜಪ ಮಾಡಲಾಯಿತು.
ಬೆಳಗಿನಿಂದ ಸಂಜೆವರೆಗೂ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮಾಚರಣೆ ನಡೆಸಿ ಸಂಜೆ ಸಮೀಪದ ಕೆರೆಕುಂಟೆಗಳಲ್ಲಿ ಹಾಗೂ ಮೊಬೈಲ್ ಟ್ಯಾಂಕರ್ಗಳಲ್ಲಿ ಗಣೇಶಮೂರ್ತಿ ವಿಸರ್ಜಿಸಲಾಯಿತು.
ಈ ಬಾರಿ ಕಟೌಟ್, ಬ್ಯಾನರ್ ನಿಷೇಧಿಸಿರುವುದರಿಂದ ರಸ್ತೆಗಳ ಎಡಬದಿಗಳಲ್ಲಿ ಗಣೇಶೋತ್ಸವದ ಬ್ಯಾನರ್ಗಳು ಕಂಡುಬರಲಿಲ್ಲ. ಮೆರವಣಿಗೆ ಸಂದರ್ಭದಲ್ಲಿ ಪಟಾಕಿ, ಮದ್ದುಗುಂಡು ಸಿಡಿಸದಂತೆ ನಿಷೇಧ ಹೇರಿದ್ದರಿಂದ ಸದ್ದುಗದ್ದಲವಿಲ್ಲದೆ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಯಿತು.
11 ಗಂಟೆ ನಂತರ ಗಣೇಶಮೂರ್ತಿ ವಿಸರ್ಜಿಸಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸಂಜೆ 6 ಗಂಟೆಯಿಂದಲೇ ಗಣೇಶಮೂರ್ತಿ ವಿಸರ್ಜಿಸಲು ಸಾರ್ವಜನಿಕರು ಕೆರೆಗಳತ್ತ ದೌಡಾಯಿಸಿದರು.
ಬಹುತೇಕ ಮನೆಗಳಲ್ಲಿ ಮಣ್ಣಿನ ಗಣಪಗಳನ್ನೇ ಪ್ರತಿಷ್ಠಾಪಿಸಿದ್ದು ಈ ಬಾರಿ ವಿಶೇಷವಾಗಿತ್ತು. ಆದರೆ, ಕೆಲವರು ಸಾರ್ವಜನಿಕ ಪ್ರದೇಶಗಳಲ್ಲಿ ಪಿಒಪಿ ಗಣೇಶಗಳನ್ನು ಪ್ರತಿಷ್ಠಾಪಿಸಿದ್ದು ಕಂಡುಬಂತು.
ವಿಸರ್ಜನೆಗೆ ವ್ಯವಸ್ಥೆ: ಗಣೇಶಮೂರ್ತಿ ವಿಸರ್ಜನೆಗೆ ಯಡಿಯೂರು, ಕೈಕೊಂಡನಹಳ್ಳಿ, ದೊಡ್ಡಕನ್ನೇನಹಳ್ಳಿ, ಕಸವನಹಳ್ಳಿ, ದೇವರ ಬೀಸನಹಳ್ಳಿ, ಮುನ್ನೇಕೊಳಲು, ದೊರೈಕೆರೆ, ಸಿಂಗಸಂದ್ರ, ಹೇರೋಹಳ್ಳಿ, ಮಲ್ಲತ್ತಹಳ್ಳಿ, ದಾಸರಹಳ್ಳಿ, ಸ್ಯಾಂಕಿ, ಹಲಸೂರು, ಕೋಗಿಲು, ಜಕ್ಕೂರು, ರಾಚೇನಹಳ್ಳಿ, ಪಾಲನಹಳ್ಳಿ, ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ ಮತ್ತು ದೊಡ್ಡಬೊಮ್ಮಸಂದ್ರ ಕೆರೆಗಳಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು.
ಇದರ ಜತೆಗೆ 198 ವಾರ್ಡ್ಗಳ 314 ಸ್ಥಳಗಳಲ್ಲಿ ಮೊಬೈಲ್ ಟ್ಯಾಂಕ್ ಹಾಗೂ 63 ಪ್ರದೇಶಗಳಲ್ಲಿ ತಾತ್ಕಾಲಿಕ ಟ್ಯಾಂಕ್ ನಿರ್ಮಿಸಲಾಗಿತ್ತು.
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅನಾಹುತ ಆಗದಂತೆ ಬಿಬಿಎಂಪಿ ಎಚ್ಚರಿಕೆ ವಹಿಸಿತ್ತು. ಪ್ರತೀ ಕೆರೆಗಳ ಸಮೀಪ 10ಕ್ಕೂ ಹೆಚ್ಚು ನುರಿತ ಈಜುಗಾರರು ಹಾಗೂ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ಹೀಗಾಗಿ ಯಾವುದೇ ಅಡೆತಡೆ ಇಲ್ಲದೆ ಗಣೇಶಮೂರ್ತಿ ವಿಸರ್ಜನೆ ಮಾಡಲು ಅವಕಾಶವಾಯಿತು.
ಬಿಗಿ ಬಂದೋಬಸ್ತ್: ಈ ಬಾರಿಯ ಗಣೇಶೋತ್ಸವದಲ್ಲಿ ಯಾವುದೇ ಅನಾಹುತವಾದರೆ ಸಂಬಂಧಪಟ್ಟ ಎಸಿಪಿ ಮತ್ತು ಡಿಸಿಪಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಗಣೇಶಮೂರ್ತಿ ವಿಸರ್ಜನೆ ಪ್ರದೇಶಗಳಲ್ಲಿ ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಗಣೇಶಮೂರ್ತಿ ವಿಸರ್ಜನೆಗೆ ನಿರ್ಮಿಸಲಾಗಿದ್ದ ಬ್ಯಾರಿಕೇಡ್ ಮೂಲಕ ಒಬ್ಬೊಬ್ಬರೇ ಕೆರೆ ಸಮೀಪ ಹೋಗುವಂತೆ ಪೆÇಲೀಸರು ಎಚ್ಚರ ವಹಿಸಿದ್ದರು. ಯಾರೊಬ್ಬರೂ ಕೆರೆಗಿಳಿಯದಂತೆ ನೋಡಿಕೊಳ್ಳಲಾಗಿತ್ತು. ಬಿಬಿಎಂಪಿ ಸಿಬ್ಬಂದಿಗಳೇ ಗಣೇಶಮೂರ್ತಿ ವಿಸರ್ಜಿಸಿದ್ದರಿಂದ ಈ ಬಾರಿ ಯಾವುದೇ ಲೋಪದೋಷವಾಗದಂತೆ ಗಣೇಶಮೂರ್ತಿಗಳನ್ನು ವಿಸರ್ಜಿಸಲಾಯಿತು.