ಬಿಬಿಎಂಪಿ ವಿರುದ್ಧ ಲೋಕಾಯುಕ್ತಕ್ಕೆ ದೂರು

 

ಬೆಂಗಳೂರು, ಸೆ.14- ಬೀದಿನಾಯಿಗಳ ಹಾವಳಿಗೆ ಇಬ್ಬರು ಮಕ್ಕಳು ಬಲಿಯಾಗಿ ಇನ್ನಿತರ ಹಲವಾರು ಮಕ್ಕಳ ಮೇಲೆ ದಾಳಿ ನಡೆಸುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವ ಬಿಬಿಎಂಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಲೋಕತಾಂತ್ರಿಕ್ ಜನತಾದಳದ ಪದಾಧಿಕಾರಿಗಳು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಲೋಕತಾಂತ್ರಿಕ್ ಜನತಾದಳದ ಅಧ್ಯಕ್ಷ ಕೆ.ಎಂ.ಪಾಲಾಕ್ಷ, ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್, ನಗರ ಘಟಕ ಉಸ್ತುವಾರಿ ಜಿ.ಸಂತೋಷ್ ಮತ್ತಿತರರು ಇಂದು ಲೋಕಾಯುಕ್ತ ವಿಶ್ವನಾಥ್ ಹೆಗಡೆ ಅವರನ್ನು ಭೇಟಿಯಾಗಿ ದೂರು ನೀಡಿದರು.
ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಅವುಗಳನ್ನು ನಿಯಂತ್ರಿಸುವಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ವಿಫಲರಾಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಕರ್ತವ್ಯ ಮರೆತಿರುವುದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ ರಕ್ಕಸ ನಾಯಿಗಳ ಹಾವಳಿಗೆ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಹಲವಾರು ಮುಗ್ದರ ಮೇಲೂ ನಾಯಿಗಳ ಹಿಂಡು ದಾಳಿ ನಡೆಸುತ್ತಿರುವುದರಿಂದ ನಗರದಲ್ಲಿ ಮಕ್ಕಳು ಶಾಲೆಗೆ ತೆರಳಲು, ಆಟವಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ.
ಬೀದಿನಾಯಿಗಳನ್ನು ಕೊಲ್ಲಬಾರದು ಹಾಗೂ ಬೇರೆ ಪ್ರದೇಶಗಳಿಗೆ ಬಿಡಬಾರದು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿದೆ. ಆದರೆ, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಬಾರದು ಎಂದು ಆದೇಶಿಸಿಲ್ಲ.
ಬಿಬಿಎಂಪಿ ಅಧಿಕಾರಿಗಳು ನಾಯಿಗಳ ಹರಣ ಮಾಡುವ ಬದಲು ಸಂತಾನಹರಣ ಚಿಕಿತ್ಸೆ ಮಾಡಿಸಿದ್ದರೆ ಇಂದು ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ. ಕೂಡಲೇ ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಭವಿಷ್ಯದಲ್ಲಿ ನಾಯಿ ಹಾವಳಿಯಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಸೂಚಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ