50 ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶಮೂರ್ತಿಗಳ ವಿಸರ್ಜನೆ

ಬೆಂಗಳೂರು, ಸೆ.14- ಸಮಸ್ಯೆ ಎದುರಾಗುವವರೆಗೂ ಜನರು ಬುದ್ಧಿ ಕಲಿಯೋಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪರಿಸರಕ್ಕೆ ಹಾನಿ ಮಾಡುವ ಬಣ್ಣದ, ಪಿಒಪಿ ಗಣೇಶ ಪ್ರತಿಷ್ಠಾಪನೆ ಮಾಡಬಾರದು ಎಂದು ಬೊಬ್ಬೆ ಹೊಡೆದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಗಣೇಶ ಚತುರ್ಥಿ ದಿನವಾದ ನಿನ್ನೆ ಒಂದೇ ದಿನ ನಗರದ ಕೆರೆ ಮತ್ತು ಮೊಬೈಲ್ ಟ್ಯಾಂಕರ್‍ಗಳಲ್ಲಿ ಸರಿಸುಮಾರು 50 ಸಾವಿರಕ್ಕೂ ಹೆಚ್ಚು ಪಿಒಪಿ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ನಿನ್ನೆ ಯಡಿಯೂರು ಕೆರೆಯಲ್ಲಿ ಒಟ್ಟು 52,009 ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದ್ದು, ಇವುಗಳ ಪೈಕಿ ಸುಮಾರು 6000 ಪಿಒಪಿ ಗಣೇಶಮೂರ್ತಿಗಳು ಎನ್ನುವುದು ಉಲ್ಲೇಖಾರ್ಹ.

ಯಡಿಯೂರು ಕೆರೆ ಒಂದರಲ್ಲೇ 6000 ಪಿಒಪಿ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಿದ್ದರೆ ಇನ್ನು ನಗರದ ಹಲವಾರು ಕೆರೆಗಳಲ್ಲಿ ಇನ್ನೆಷ್ಟು ಬಣ್ಣದ ಗಣೇಶಮೂರ್ತಿಗಳನ್ನು ವಿಸರ್ಜನೆ ಮಾಡಿರಬಹುದು ನೀವೇ ಊಹಿಸಿ.
ಬ್ಯಾನ್: ರಾಸಾಯನಿಕ ವಸ್ತು ಬಳಕೆ ಮಾಡಿ ತಯಾರಿಸಲಾದ ಗಣೇಶಮೂರ್ತಿ ಹಾಗೂ ಪಿಒಪಿ ವಿಗ್ರಹಗಳನ್ನು ಬಳಸಬಾರದು ಎಂದು ನಾವು ಎಷ್ಟೇ ಮನವಿ ಮಾಡಿಕೊಂಡರೂ ಜನ ಮಾತ್ರ ತಮ್ಮ ಧೋರಣೆ ಬದಲಿಸಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಪಿಒಪಿ ಮತ್ತು ಬಣ್ಣದ ಗಣೇಶಮೂರ್ತಿಗಳನ್ನು ಬ್ಯಾನ್ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಗಣೇಶಚತುರ್ಥಿಗೂ ಒಂದು ತಿಂಗಳು ಮುನ್ನವೇ ಸಾರ್ವಜನಿಕರಿಗೆ ಬಣ್ಣದ ಮತ್ತು ಪಿಒಪಿ ಗಣೇಶಮೂರ್ತಿಗಳನ್ನು ಮಾರಾಟ ಮಾಡಬಾರದು. ಪರಿಸರ ಕಾಪಾಡುವ ಉದ್ದೇಶದಿಂದ ನಾಗರಿಕರು ಮಣ್ಣಿನ ಗಣಪಗಳನ್ನೇ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲಾಗಿತ್ತು.
ಆದರೆ, ನಮ್ಮ ಈ ಮನವಿಗೆ ಸಾರ್ವಜನಿಕರು ಸ್ಪಂದಿಸದಿರುವುದು ವಿಷಾದನೀಯ. ಹೀಗಾಗಿ ಅನಿವಾರ್ಯವಾಗಿ ಮುಂದಿನ ವರ್ಷದಿಂದ ಪಿಒಪಿ ಗಣೇಶಮೂರ್ತಿಗಳನ್ನು ಬ್ಯಾನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ವಿವರಿಸಿದರು.

ಮುಂದಿನ ವರ್ಷವೂ ನಾಗರಿಕರು ಬಣ್ಣದ ಗಣಪಗಳನ್ನೇ ಪ್ರತಿಷ್ಠಾಪನೆ ಮಾಡಿದರೆ ಅಂತಹ ವಿಗ್ರಹಗಳನ್ನು ನಗರದ ಕೆರೆಗಳಲ್ಲಿ ಹಾಗೂ ಮೊಬೈಲ್ ಟ್ಯಾಂಕರ್‍ಗಳಲ್ಲಿ ವಿಸರ್ಜಿಸಲು ಅವಕಾಶ ನೀಡುವುದಿಲ್ಲ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.
ಇನ್ನು ಮುಂದಾದರೂ ನಾಗರಿಕರು ಎಚ್ಚೆತ್ತುಕೊಳ್ಳಬೇಕು. ಪರಿಸರ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ಮಹತ್ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕು. ಮುಂದಿನ ವರ್ಷವಾದರೂ ಪಿಒಪಿ ಗಣೇಶಮೂರ್ತಿಗಳನ್ನು ಖರೀದಿಸಬಾರದು ಎಂದು ಮಂಜುನಾಥ್ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ