ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಉದ್ಘಾಟನೆ

ಬೆಂಗಳೂರು, ಸೆ.11- ಹೆಬ್ಬಾಳದ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯ ಉದ್ಘಾಟನಾ ಸಮಾರಂಭ ಇಂದು ವಿದ್ಯುಕ್ತವಾಗಿ ನೆರವೇರಿತು.
ಕೃಷಿ ಎಂಜಿನಿಯರಿಂಗ್ ವಿಭಾಗದ ಮಹತ್ವದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಉನ್ನತ ಮಟ್ಟದ ರಾಷ್ಟ್ರೀಯ ಅಕ್ರಿಡಿಯೇಷನ್ ಸಮಿತಿ 2016ರಲ್ಲಿ ಶಿಫಾರಸು ಮಾಡಿದಂತೆ ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ 2017ರ ಮೇ 29ರಂದು ನಡೆಸಿದ 374ನೆ ಆಡಳಿತ ಮಂಡಳಿ ಸಭೆಯಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ 2018ರ ಜುಲೈ 11ರಂದು ಕೃಷಿ ಎಂಜಿನಿಯರಿಂಗ್ ವಿಭಾಗವನ್ನು ಕೃಷಿ ಎಂಜಿನಿಯರಿಂಗ್ ಮಹಾ ವಿದ್ಯಾಲಯವಾಗಿ ಉನ್ನತೀಕರಿಸಲು ಆದೇಶಿಸಿತ್ತು. ಅದರಂತೆ ಇಂದಿನಿಂದ ಈ ಮಹಾವಿದ್ಯಾಲಯಕ್ಕೆ ಚಾಲನೆ ದೊರೆತಿದೆ.
1963ರ ಶಾಸನ ಸಭೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಕಾಯ್ದೆ ಪ್ರಸ್ತಾವನೆಗೊಂಡು 1965ರಲ್ಲಿ ಹೆಬ್ಬಾಳ ಆವರಣದಲ್ಲಿ ಕೃಷಿ ವಿವಿ ತಲೆ ಎತ್ತಿತ್ತು. ಅದರ ಪ್ರಮುಖ ವಿಭಾಗಗಳಲ್ಲಿ ಒಂದಾಗಿದ್ದ ಕೃಷಿ ಎಂಜಿನಿಯರಿಂಗ್ ವಿಭಾಗ ಹೆಬ್ಬಾಳದ ಆಗ್ರೋ ಇಂಡಸ್ಟ್ರೀಸ್ ಕಾಪೆರ್Çರೇಷನ್ ಕಟ್ಟಡದಲ್ಲಿ ಆರಂಭಗೊಂಡು ಹೆಬ್ಬಾಳದ ಮುಖ್ಯ ಸಂಶೋಧನಾ ಕೇಂದ್ರಕ್ಕೆ ಸ್ಥಳಾಂತರಗೊಂಡಿತ್ತು.

ಕೃಷಿ ಯಂತ್ರೋಪಕರಣಗಳ ಕುರಿತಾದ ಸಂಶೋಧನೆ ಮತ್ತು ಅವುಗಳ ದುರಸ್ತಿ ಕಾರ್ಯನಿರ್ವಹಣೆಯೊಂದಿಗೆ ಸೇವಾ ಕೇಂದ್ರದ ಜವಾಬ್ದಾರಿ ಹೊತ್ತು 1991ರ ವರೆಗೆ ಕಾರ್ಯನಿರ್ವಹಿಸಿತ್ತು. ತದನಂತರ ಜಿಕೆವಿಕೆ ಆವರಣಕ್ಕೆ ಸ್ಥಳಾಂತರಗೊಂಡ ಈ ವಿಭಾಗಕ್ಕೆ ಹಂತ ಹಂತವಾಗಿ ಎಂಎಸ್‍ಸಿ, ಮಣ್ಣು ಮತ್ತು ನೀರು ಸಂರಕ್ಷಣೆ ಎಂಜಿನಿಯರಿಂಗ್, ಎಂಜಿನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕೃಷಿ ವಿವಿಯಲ್ಲಿ ಆರಂಭಿಸಿತು.
ನಂತರ ಏರುಮುಖದಲ್ಲಿ ಪ್ರಗತಿ ಸಾಧಿಸಿದ ವಿಭಾಗ ಇದೀಗ ಕೃಷಿ ಎಂಜಿನಿಯರಿಂಗ್ ವಿವಿಯಾಗಿ ತಲೆ ಎತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ