ವಿಧಾನಪರಿಷತ್‍ನ ಮೂರು ಸ್ಥಾನಗಳಿಗೆ ಅ.3 ರಂದು ಮತದಾನ

Varta Mitra News

ಬೆಂಗಳೂರು, ಸೆ.11-ವಿಧಾನಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ತೆರವಾಗಿರುವ ವಿಧಾನಪರಿಷತ್‍ನ ಮೂರು ಸ್ಥಾನಗಳಿಗೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದ್ದು ಅ.3 ರಂದು ಮತದಾನ ನಡೆಯಲಿದೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ವಿಧಾನಪರಿಷತ್ ಸದಸ್ಯರಾಗಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್(ಕೊರಟಗೆರೆ), ಕೆ.ಎಸ್.ಈಶ್ವರಪ್ಪ (ಶಿವಮೊಗ್ಗ ನಗರ) ಹಾಗೂ ವಿ.ಸೋಮಣ್ಣ (ಗೋವಿಂದರಾಜನಗರ) ವಿಧಾನಸಭೆಗೆ ಆಯ್ಕೆಯಾಗಿದ್ದರು.

ತೆರವಾಗಿದ್ದ ಈ ಸ್ಥಾನಕ್ಕೆ ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿದೆ. ಇದೇ 14 ರಂದು ಅಧಿಸೂಚನೆ ಪ್ರಕಟಿಸಲಿದ್ದು, 22 ರಿಂದ ನಾಮಪತ್ರ ಸಲ್ಲಿಸಬಹುದು. 24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, 26 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ಅಕ್ಟೋಬರ್ 3 ರಂದು ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, 5 ಗಂಟೆ ನಂತರ ಮತ ಎಣಿಕೆ ಪ್ರಾರಂಭವಾಗಿ ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ. ಸಂಜೆ 6ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪವನ್ ದಿವಾನ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೀಗ ಆಯೋಗ ದಿನಾಂಕ ಘೋಷಣೆ ಮಾಡಿರುವುದರಿಂದ ಮೂರೂ ಪಕ್ಷಗಳಲ್ಲಿ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ವಿಧಾನಸಭೆಯ ಬಲಾಬಲದ ಪ್ರಕಾರ ಬಿಜೆಪಿ 1, ಕಾಂಗ್ರೆಸ್ 1 ಸ್ಥಾನವನ್ನು ಪಡೆದರೆ ಮೂರನೇ ಸ್ಥಾನಕ್ಕೆ ಸ್ಪರ್ಧೆ ಏರ್ಪಡಲಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದಿಂದ 3ನೇ ಅಭ್ಯರ್ಥಿ ಕಣಕ್ಕಿಳಿದರೆ ದೋಸ್ತಿಗಳಿಗೆ ಎರಡು ಸ್ಥಾನ ದಕ್ಕಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ