ಸರ್ಕಾರ ಉರುಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.9- ರಾಜ್ಯ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನಿಸುವುದಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರು ಏಕೆ ಆತಂಕ ಪಡುತ್ತಿದ್ದಾರೆ ಎಂಬುದು ಆ ಭಗವಂತನಿಗೇ ಗೊತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಉರುಳಿಸುವ ಯಾವುದೇ ಉದ್ದೇಶ ಬಿಜೆಪಿಗೆ ಇಲ್ಲ. ಆದರೆ ಕಾಂಗ್ರೆಸ್‍ನ ಹಲವು ಪ್ರಮುಖ ನಾಯಕರು ಬಿಜೆಪಿ ಸೇರುತ್ತಾರೆ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಗೆ ನಾವು ಅಣಿಯಾಗುತ್ತಿದ್ದೇವೆ. ಈಗಾಗಲೇ ಚುನಾವಣಾ ಸಿದ್ಧತೆಗಳು ಆರಂಭವಾಗಿವೆ ಎಂದು ಅವರು ಹೇಳಿದರು.
ಪಕ್ಷದ ಕೆಲವು ನಾಯಕರು ಈಗಾಗಲೇ ರಾಜ್ಯಾದ್ಯಂತ ಪ್ರವಾಸ ಆರಂಭಿಸಿದ್ದಾರೆ. ತಾವು ಕೂಡ ಸದ್ಯದಲ್ಲೇ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತೇನೆ. ನಿನ್ನೆ ದೆಹಲಿಗೆ ಹೋಗಿ ಬಂದಿದ್ದೇನೆ, ಮತ್ತೆ ಹೋಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಲೋಕಸಭೆ ಚುನಾವಣೆಗೂ ಮೊದಲೇ ಮೈತ್ರಿ ಸರ್ಕಾರಕ್ಕೆ ಭಯ ಆರಂಭವಾಗಿದೆ. ಬೆಳಗಾವಿ ರಾಜಕೀಯದಿಂದ ಸರ್ಕಾರಕ್ಕೆ ಆಪತ್ತು ಬರುವ ಲಕ್ಷಣ ಕಾಣುತ್ತಿದೆ ಎಂದು ಅವರು ಹೇಳಿದರು.

ತಂತ್ರ-ಪ್ರತಿತಂತ್ರ
ರಾಷ್ಟ್ರ ರಾಜಕಾರಣಿ ಸಭೆಯನ್ನು ಬಿಟ್ಟು ಬೆಂಗಳೂರಿಗೆ ಏಕಾಏಕಿ ಬಂದಿರುವ ಬಿ.ಎಸ್.ಯಡಿಯೂರಪ್ಪ ಅವರ ನಡೆ, ಹಲವು ಅನುಮಾನಗಳಿಗೆ ಕಾರಣವಾಗಿದ್ದು, ರಾಜ್ಯದಲ್ಲಿ ಮತ್ತೆ ಆಪರೇಷನ್ ಕಮಲ ನಡೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.
ಬಲವಾದ ಕಾರಣವಿಲ್ಲದೆ ಯಡಿಯೂರಪ್ಪ ಸಭೆ ಮೊಟಕುಗೊಳಿಸಿ ದೆಹಲಿಯಿಂದ ಬೆಂಗಳೂರಿಗೆ ಬಂದಿಲ್ಲ. ಅವರು ಬಂದಿರುವುದರ ಹಿಂದೆ ಒಂದು ಉದ್ದೇಶವಿದೆ ಎಂದು ಭಾವಿಸಿರುವ ಮೈತ್ರಿ ಪಕ್ಷದ ಮುಖಂಡರು, ಪ್ರತಿ ತಂತ್ರಗಳನ್ನು ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ.

ಸರ್ಕಾರವನ್ನು ಬೀಳಿಸಲ್ಲ ಎಂಬ ಯಡಿಯೂರಪ್ಪ ಅವರ ಹೇಳಿಕೆಯನ್ನು ಒಪ್ಪಿಕೊಳ್ಳಲು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಸಿದ್ಧರಿಲ್ಲ. ಯಡಿಯೂರಪ್ಪ ಅವರು ನಿರ್ದಿಷ್ಟ ಕಾರ್ಯತಂತ್ರದೊಂದಿಗೆ ದೆಹಲಿಯಿಂದ ಮರಳಿದ್ದಾರೆ ಎಂಬ ಅನುಮಾನ ಮೈತ್ರಿ ಪಡೆಯನ್ನು ಕಾಡುತ್ತಿದ್ದು, ಸರ್ಕಾರಕ್ಕೆ ಎಲ್ಲಿ ಕಂಟಕ ತರುತ್ತಾರೋ ಎಂಬ ಭಯದಲ್ಲಿ ಉಭಯ ಪಕ್ಷಗಳ ನಾಯಕರು ಇದ್ದಾರೆ.
ಕಳೆದ ರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಆಪ್ತ ಶಾಸಕರು ಮತ್ತು ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅದೇ ರೀತಿ ಪರಮೇಶ್ವರ ಕೂಡ ತಮ್ಮ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ