ಭಾರತ್ ಬಂದ್‍ಗೆ ಪರ-ವಿರೋಧ ನಿಲುವು

ಬೆಂಗಳೂರು, ಸೆ.9- ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ನಿರಂತರ ಏರಿಕೆ ವಿರೋಧಿಸಿ ಕಾಂಗ್ರೆಸ್ ನಾಳೆ ಕರೆ ನೀಡಿರುವ ಭಾರತ್ ಬಂದ್‍ಗೆ ಪರ-ವಿರೋಧ ನಿಲುವು ವ್ಯಕ್ತವಾಗಿದೆ. ಬಿಜೆಪಿ ಹೊರತುಪಡಿಸಿ ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಎಸ್‍ಪಿ, ಎಡಪಕ್ಷ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ಬಂದ್‍ಗೆ ಬೆಂಬಲ ಘೋಷಿಸಿವೆ.

ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘಟನೆಗಳು ಬಂದ್ ಬೆಂಬಲಿಸಿದರೆ, ಕೆಲವು ಸಂಘಟನೆಗಳು ಬಂದ್‍ನಿಂದ ದೂರ ಉಳಿಯಲು ನಿರ್ಧರಿಸಿವೆ. ಮತ್ತೆ ಕೆಲವು ಸಂಘಟನೆಗಳು ನೈತಿಕ ಬೆಂಬಲ ಘೋಷಿಸಿ ತಟಸ್ಥವಾಗಿ ಉಳಿದಿವೆ.
ನಾಳೆ ನಡೆಯಲಿರುವ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟುವ ಸಾಧ್ಯತೆ ಹೆಚ್ಚಾಗಿದ್ದು, ವಾರಾಂತ್ಯಕ್ಕೆ ತಮ್ಮ ಊರುಗಳಿಗೆ ತೆರಳಿರುವವರು ತೊಂದರೆಗೊಳಗಾಗುವ ಸಂಭವವಿದೆ. ಹಾಗಾಗಿ ಅವರೆಲ್ಲ ಪರ್ಯಾಯ ದಾರಿ ಕಂಡುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ, ಜಯಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ, ಪ್ರವೀಣ್‍ಶೆಟ್ಟಿ ಬಣ, ಕನ್ನಡ ಸೇನೆ, ಆ್ಯಪ್ ಆಧಾರಿತ ಟ್ಯಾಕ್ಸಿ, ಆಟೋ ಸೇವೆ ಸೇರಿದಂತೆ ಬಂದ್‍ಗೆ ಬಹಿರಂಗ ಬೆಂಬಲ ನೀಡಿವೆ.

ಲಾರಿ ಮಾಲೀಕರು ಮತ್ತು ಚಾಲಕರ ಸಂಘಗಳ ಒಕ್ಕೂಟ ತಟಸ್ಥವಾಗುಳಿಯಲು ನಿರ್ಧರಿಸಿದೆ. ಹೊಟೇಲ್ ಮಾಲೀಕರು ಬಂದ್‍ನಿಂದ ಹಿಂದೆ ಉಳಿಯಲು ನಿರ್ಧರಿಸಿದ್ದು, ಹೊಟೇಲ್ ಮಾಲೀಕರು ಬಂದ್‍ಗೆ ಸಹಕರಿಸದಿದ್ದರೆ ಹೊಟೇಲ್‍ಗೆ ಬಂದು ಊಟ ಮಾಡಿ ಬಿಲ್ ಕೊಡದಿರಲು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಕೆಎಸ್‍ಆರ್‍ಟಿಸಿ, ನಾಲ್ಕು ನಿಗಮಗಳು, ಬಿಎಂಟಿಸಿ ಬಹಿರಂಗ ಬೆಂಬಲ ನೀಡದಿದ್ದರೂ ಸಾರಿಗೆ ಸಂಸ್ಥೆಯ ಕಾರ್ಮಿಕ ಸಂಘಟನೆಗಳು ಬಂದ್‍ಗೆ ಬೆಂಬಲ ನೀಡಿರುವುದರಿಂದ ಸಾರಿಗೆ ವ್ಯವಸ್ಥೆಯಲ್ಲಿ ಭಾರೀ ವ್ಯತ್ಯಯವಾಗುವ ಸಾಧ್ಯತೆ ಇದೆ.
ಕೆಎಸ್‍ಆರ್‍ಟಿಸಿ, ಆಟೊ, ಓಲಾ, ಊಬರ್ ಕ್ಯಾಬ್, ಐಟಿ-ಬಿಟಿ ಬಸ್‍ಗಳು ಬಂದ್‍ಗೆ ಬೆಂಬಲ ಸೂಚಿಸಿರುವುದರಿಂದ ಸಾರ್ವಜನಿಕರು ತೊಂದರೆಗೊಳಗಾಗುವ ಸಂಭವವಿದೆ.

ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ. ಆದರೆ ಪರಿಸ್ಥಿತಿ ನೋಡಿಕೊಂಡು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಔಷಧಿ ಅಂಗಡಿ, ಆಸ್ಪತ್ರೆ, ತರಕಾರಿ, ಹಾಲು ಸರಬರಾಜು, ತುರ್ತು ಸೇವೆಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ಸೇವೆಗಳು ವ್ಯತ್ಯಯವಾಗುವ ನಿರೀಕ್ಷೆಯಿದೆ.
ಎಐಟಿಯುಸಿ ಸಂಯೋಜಿತ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್, ಓಲಾ-ಊಬರ್ ಟ್ಯಾಕ್ಸಿ ಫಾರ್ ಶೂರ್ ಮಾಲೀಕರ ಸಂಘ, ಕೆಲ ಆಟೋ ಚಾಲಕರ ಸಂಘಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ವಾಹನಗಳನ್ನು ರಸ್ತೆಗಿಳಿಸದಿರಲು ಚಾಲಕರು ಮತ್ತು ಮಾಲೀಕರು ನಿರ್ಧರಿಸಿದ್ದಾರೆ.
ಬೆಂಗಳೂರಿನ ಕೆಆರ್ ಮಾರುಕಟ್ಟೆ ತರಕಾರಿ, ಹಣ್ಣು ಸಗಟು ಮಾರಾಟಗಾರರ ಸಂಘ, ಅಖಿಲ ಕರ್ನಾಟಕ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್, ಬೆಂಗಳೂರು ಪ್ರವಾಸಿ ವಾಹನಗಳ ಮಾಲೀಕರ ಸಂಘ, ರಾಜ್ಯ ಲಾರಿ ಮಾಲೀಕರ ಸಂಘ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ಕೆಲ ಸಂಘಟನೆಗಳು ಬಂದ್‍ಗೆ ನೈತಿಕ ಬೆಂಬಲ ನೀಡಿವೆಯಾದರೂ, ಸೇವೆ ಮುಂದುವರಿಸಲು ನಿರ್ಧರಿಸಿವೆ.

ಈ ನಡುವೆ ಕೆಲ ಸಂಘಟನೆಗಳು ಇದು ರಾಜಕೀಯ ಪ್ರೇರಿತ ಬಂದ್ ಎಂದು ಬೆಂಬಲ ನೀಡದಿರಲು ನಿರ್ಧರಿಸಿವೆ. ಸರ್ಕಾರಿ ಬಸ್ ಸೇವೆ ಸ್ಥಗಿತಗೊಳಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಬಸ್ ಸೇವೆ ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದರಿಂದ ಕಡ್ಡಾಯವಾಗಿ ಸೇವೆ ನೀಡಬೇಕು. ನಾಳೆ ಎಲ್ಲ ನೌಕರರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು. ಒಂದು ವೇಳೆ ಗೈರಾದರೆ ಆ ದಿನದ ವೇತನ ಕಡಿತಗೊಳಿಸುವುದರ ಜತೆಗೆ ಶಿಸ್ತು ಕ್ರಮ ಜರುಗಿಸುವುದಾಗಿ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರು ನೌಕರರಿಗೆ ಎಚ್ಚರಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಎಐಟಿಯುಸಿ ಸಂಯೋಜಿತ ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್, ಭಾರತ ಬಂದ್‍ಗೆ ಸಂಪೂರ್ಣ ಬೆಂಬಲವಿದೆ. ಸೋಮವಾರ ರಾಜ್ಯ ಸಾರಿಗೆಯ ನಾಲ್ಕು ನಿಗಮಗಳಿಂದ ಒಂದೇ ಒಂದು ಬಸ್ ರಸ್ತೆಗೆ ಇಳಿಯುವುದಿಲ್ಲ. ವೇತನ ಕಡಿತಗೊಳಿಸುವ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ