ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ: ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಶೋಭಾ ಕರಂದ್ಲಾಜೆ ಸವಾಲು

ಬೆಂಗಳೂರು, ಸೆ.9- ತಾಕತ್ತಿದ್ದರೆ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕಳೆದ 40 ವರ್ಷಗಳಿಂದಲೂ ರಾಜ್ಯದಲ್ಲಿ ರಾಜಕಾರಣ ಮಾಡುತ್ತಾ ಬಂದಿದ್ದಾರೆ. ರಾಜಧಾನಿ ಬೆಂಗಳೂರಿಗೆ ಬರುವಾಗ ಯಾರೂ ಕೂಡ ಕಿವಿಗೆ ಹೂವು ಇಟ್ಟುಕೊಂಡು ಬಂದಿಲ್ಲ. ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಕಾಂಗ್ರೆಸ್‍ನ ಆಂತರಿಕ ಭಿನ್ನಾಭಿಪ್ರಾಯದಿಂದ ಬಿಕ್ಕಟ್ಟು ಉಲ್ಬಣವಾಗಿದೆ. ಅವರವರೇ ಕಿತ್ತಾಡಿಕೊಂಡು ಬಿಜೆಪಿಯ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಚಿವ ಡಿ.ಕೆ.ಶಿವಕುಮಾರ್ ಅವರು ಸೇರಿದಂತೆ ಯಾರೂ ಬೇಕಾದರೂ ಪ್ರಧಾನಿಯವರನ್ನು ಭೇಟಿಯಾಗಬಹುದು. ಅದೇ ರೀತಿ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯವರನ್ನೂ ಭೇಟಿಯಾಗಬಹುದು. ಇದರಿಂದ ನಮಗೇನೂ ಸಮಸ್ಯೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ