ಬೆಂಗಳೂರು,ಸೆ.7-ಇದೇ ತಿಂಗಳು ನಡೆಯುವ ಮೇಯರ್ ಚುನಾವಣೆಯಲ್ಲಿ ಈ ಬಾರಿ ಒಕ್ಕಲಿಗರ ಸಮುದಾಯಕ್ಕೆ ಮೇಯರ್ ಸ್ಥಾನವನ್ನು ಕಲ್ಪಿಸಿಕೊಡಬೇಕೆಂದು ರಾಜ್ಯ ಒಕ್ಕಲಿಗರ ಒಕ್ಕೂಟ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಪಿ.ವಿ.ದೇವರಾಜ್ ಈಗಾಗಲೇ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಮೇಯರ್, ಉಪಮೇಯರ್ ಸ್ಥಾನವನ್ನು ಪಡೆದುಕೊಂಡು ಆಡಳಿತ ನಡೆಸುತ್ತಿದೆ. ಅದರಂತೆ ಈ ಬಾರಿ ಸೌಮ್ಯ ಶಿವಕುಮಾರ್ ಕನ್ನಡದಲ್ಲಿ ಎಂಎ ಸ್ನಾತಕೋತ್ತರ ಪದವೀಧರರಾಗಿದ್ದಾರೆ.
ಅವರು ಶಾಂತಿನಗರ ವಿಧಾನಸಭಾ ಕ್ಷೇತ್ರದ ವಾರ್ಡ್ 117ರಲ್ಲಿ ಅತಿ ಹೆಚ್ಚು ಮತಗಳಿಂದ 2 ಬಾರಿ ಬೃಹತ್ ಮಹಾನಗರ ಪಾಲಿಕೆ ಸದಸ್ಯರಾಗಿದ್ದಾರೆ.
ಆದ್ದರಿಂದ ಇವರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರು ಬೆಂಬಲ ನೀಡಿ ಸೌಮ್ಯ ಅವರನ್ನು ಮೇಯರ್ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.
ಅನೇಕ ವರ್ಷಗಳಿಂದ ಒಕ್ಕಲಿಗರ ಸಮುದಾಯಕ್ಕೆ ಮೇಯರ್ ಸ್ಥಾನ ದೊರಕದಿರುವುದು ನೋವಿನ ಸಂಗತಿಯಾಗಿದೆ. ಈ ಬಾರಿ ಸಾಮಾನ್ಯ ಮಹಿಳೆಗೆ ಮೇಯರ್ ಸ್ಥಾನ ಮೀಸಲಿರಿಸಲಾಗಿದೆ. ಆದ್ದರಿಂದ ಈ ಸ್ಥಾನವನ್ನು ಅಲಂಕರಿಸಲು ಸೌಮ್ಯ ಶಿವಕುಮಾರ್ ಅರ್ಹರಾಗಿದ್ದಾರೆ ಎಂದರು.
ಬಿಬಿಎಂಪಿ ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಅತಿಹೆಚ್ಚು ಒಕ್ಕಲಿಗ ಮತದಾರರು ಇದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಒಮ್ಮತದ ಅಭ್ಯರ್ಥಿಗಳು ಗೆಲುವು ಸಾಧಿಸಲು ಅನುಕೂಲವಾಗುತ್ತದೆ. ಆದ್ದರಿಂದ ಒಕ್ಕಲಿಗ ಸಮುದಾಯದ ಸೌಮ್ಯ ಶಿವಕುಮಾರ್ ಅವರಿಗೆ ಮೇಯರ್ ಸ್ಥಾನ ನೀಡಬೇಕೆಂದು ಕೋರಿದರು.