ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಲು ಒತ್ತಾಯ

ಬೆಂಗಳೂರು,ಸೆ.7- ಹೈದರಾಬಾದ್-ಕರ್ನಾಟಕ ಪ್ರದೇಶ ಅಭಿವೃದ್ದಿಗಾಗಿ ಕಲಬುರಗಿಯಲ್ಲಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕೆಂದು ಹೈದರಾಬಾದ್-ಕರ್ನಾಟಕ ಹೋರಾಟ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ವೈದ್ಯನಾಥ್ ಪಾಟೀಲ್ ಮಾತನಾಡಿ, 371 ಜೆ ಕಲಂ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ಇದೆ. ಹೈದರಾಬಾದ್ ಕರ್ನಾಟಕ ಭಾಗದ ಜನರ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡಬೇಕು ಎಂದರು.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಹೈ-ಕ ಅಭಿವೃದ್ಧಿ ಮಂಡಳಿ ತನ್ನ ಗುರಿ ತಲುಪಲು ವಿಫಲವಾಗಿದೆ. ಹೈಕ ವಿಭಾಗದ ಕಾಮಗಾರಿಗಳ ಸಮರ್ಪಕ ಅನುಷ್ಠಾನಕ್ಕಾಗಿ ಪ್ರತ್ಯೇಕ ತಾಂತ್ರಿಕ ವ್ಯವಸ್ಥೆಯನ್ನು ಸರ್ಕಾರ ಜಾರಿಗೊಳಿಸಬೇಕಾಗಿದೆ.

ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳ ನೇಮಕಾತಿಯಲ್ಲಿ ಕನಿಷ್ಟ 5ರಿಂದ 8 ವರ್ಷಗಳ ವಯಸ್ಸಿನ ಸಡಿಲಿಕೆ ನೀಡಬೇಕು, ನೇಮಕಾತಿಗಾಗಿ ನಡೆಯುವ ಪರೀಕ್ಷೆಗಳಲ್ಲಿ ಆ ಭಾಗದ ಅಭ್ಯರ್ಥಿಗಳಿಗೆ 15 ಕೃಪಾಂಕ ನೀಡಬೇಕು, ಸರ್ಕಾರ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಸಹ ಇದೇ ನಿಯಮ ಅನುಸರಿಸಬೇಕು, 371 ಜೆ ಕಲಂ ಆದೇಶದಿಂದ ಉಂಟಾಗಿರುವ ವಿವಾದಗಳ ಇತ್ಯರ್ಥಕ್ಕಾಗಿ ಆಡಳಿತ ನ್ಯಾಯಾಧೀಕರಣ ಪೀಠಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಹೈಕ ಪ್ರದೇಶದ ಸರ್ಕಾರಿ ಶಾಲೆಗಳಿಗೆ ಸಮರ್ಪಕ ಮೂಲಭೂತ ಸೌಲಭ್ಯ ವೈದ್ಯಕೀಯ ಸೀಟು, ಆಕಾಂಕ್ಷಿ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. ಈ ಪ್ರದೇಶದಲ್ಲಿ ಹೆಚ್ಚಾಗಿ ರೈತರು ತೊಗರಿ, ಸೋಯ, ಅವರೆ, ಹೆಸರು, ಉದ್ದು ಬೆಳೆಯುತ್ತಾರೆ. ಅವರ ಹಿತಾಸಕ್ತಿ ಕಾಪಾಡಲು ಮಂಡಳಿ ಅವಶ್ಯಕತೆ ಇದೆ. ಹೀಗಾಗಿ ದ್ವಿದಳ ಧಾನ್ಯಗಳ ಮಂಡಳಿಯನ್ನು ಕರ್ನಾಟಕ ಹಾಲು ಫೆಡರೇಷನ್ ಮಾದರಿಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ