ಬೆಂಗಳೂರು, ಸೆ.6- ಪಿಒಪಿ (ಪ್ಲ್ಯಾಸ್ಟರ್ ಆಫ್ ಫ್ಯಾರೀಸ್) ಗೌರಿ-ಗಣೇಶ ಮೂರ್ತಿಗಳ ಮಾರಾಟ ಹಾಗೂ ವಿಸರ್ಜನೆಗೆ ಅವಕಾಶ ಇಲ್ಲ ಎಂದು ಅರಣ್ಯ ಸಚಿವ ಆರ್.ಶಂಕರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಒಪಿ ಗೌರಿ-ಗಣೇಶ ಮೂರ್ತಿ ಮಾರಾಟ ಮತ್ತು ವಿಸರ್ಜನೆ ತಡೆಯುವಂತೆ ರಾಜ್ಯದ ಎಲ್ಲಾ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಹೊರ ರಾಜ್ಯಗಳಿಂದ ಬರುವ ಮೂರ್ತಿಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು, ಚೆಕ್ಪೆÇೀಸ್ಟ್ನಲ್ಲಿ ಕಡ್ಡಾಯವಾಗಿ ತಪಾಸಣೆ ಮಾಡಿ ಪಿಒಪಿ ಗಣೇಶಮೂರ್ತಿಗಳಾಗಿದ್ದರೆ ಮುಟ್ಟುಗೋಲು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಇವುಗಳನ್ನು ನೀರಿನಲ್ಲಿ ವಿಸರ್ಜಿಸಿದಾಗ ಬಣ್ಣಗಳಲ್ಲಿನ ರಾಸಾಯನಿಕ ನೀರಿನಲ್ಲಿ ಸೇರಿ ಜನರಿಗೆ ರೋಗಗಳು ಹರಡುತ್ತವೆ. ಹಾಗಾಗಿ ಈ ಮೂರ್ತಿಗಳನ್ನು ಬಳಸಬಾರದು ಎಂದು ತಿಳಿಸಿದರು.
ಗೌರಿ-ಗಣೇಶ ಹಬ್ಬದ ವೇಳೆ ಐದು ಅಡಿಗಿಂತ ಎತ್ತರದ ಮೂರ್ತಿಗಳನ್ನು ಸಂಘ-ಸಂಸ್ಥೆಗಳಾಗಲಿ ಇತರೆ ಯಾರೇ ಆಗಲಿ ಪ್ರತಿಷ್ಠಾಪಿಸಬಾರದು ಎಂದು ಹೇಳಿದ ಸಚಿವರು, ಕಗಾದದ ಗಣೇಶ ಮೂರ್ತಿಗಳ ಬಳಕೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.