ಎಸಿಬಿ ಯನ್ನು ಮುಂದುವರಿಸುವುದಕ್ಕೆ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಕ್ರೋಶ

ಬೆಂಗಳೂರು, ಸೆ.6-ಚುನಾವಣೆಗೂ ಮುನ್ನು ಎಸಿಬಿಯನ್ನು ಮುಚ್ಚುವುದಾಗಿ ಹೇಳಿದ್ದ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಬಳಿಕ ಎಸಿಬಿಯನ್ನು ಮಚ್ಚುವುದಿಲ್ಲ, ಮುಂದುವರೆಸುತ್ತೇವೆ ಎಂದು ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲಿಸಿದ್ದಾರೆ. ಅಧಿಕಾರ ಇದ್ದಾಗ ಒಂದು ರೀತಿ, ಇಲ್ಲದಿದ್ದಾಗ ಒಂದು ರೀತಿ ನಿಲುವುಗಳು ಒಳ್ಳೆಯದಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿಂದು ನಡೆದ ಲೋಕಾಯುಕ್ತ ಬಲ ಪಡಿಸಿ ವಿಚಾರ ಸಂಕಿರಣದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ಕುಮಾರಸ್ವಾಮಿ ಅವರು ಲೋಕಾಯುಕ್ತವನ್ನು ಸದೃಢಗೊಳಿಸುತ್ತೇವೆ. ಎಸಿಬಿಯನ್ನು ಮುಚ್ಚೆತ್ತೇವೆ ಎಂದು ಹೇಳಿದ್ದರು. ಆದರೆ, ಈಗ ಉಲ್ಟಾ ಹೊಡೆದಿದ್ದಾರೆ. ಈ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾಯುಕ್ತ ಸಂಸ್ಥೆಯನ್ನು ಯಶಸ್ವಿಯಾಗಿ ದುರ್ಬಲಗೊಳಿಸಿದರು. ಕುಮಾರಸ್ವಾಮಿ ಸರ್ಕಾರ ಅದನ್ನೇ ಮುಂದುವರೆಸುತ್ತಿದೆ ಎಂದು ಕಿಡಿ ಕಾರಿದರು.

ಎಸಿಬಿ ರಚನೆ ಅಗತ್ಯ ಇರಲಿಲ್ಲ ಎಂದು ಕಾಂಗ್ರೆಸ್‍ನ ನಾಯಕ ಹಾಗೂ ಮಾಜಿ ಸಚಿವ ಬಿ.ಕೆ.ಚಂದ್ರಶೇಖರ್ ಹೇಳಿದ್ದರು. ಎಸಿಬಿಯನ್ನು ಯಾವ ಕಾರಣಕ್ಕಾಗಿ ರಚಿಸಿದರು ಎಂಬ ಬಗ್ಗೆ ನಾನು ಚರ್ಚಿಸುವುದಿಲ್ಲ. ಆದರೆ, ಲೋಕಾಯುಕ್ತವನ್ನು ದುರ್ಬಲಗೊಳಿಸುವಂತಹ ಎಸಿಬಿ ಸಂಸ್ಥೆ ಅಗತ್ಯವಿರಲಿಲ್ಲ ಎಂದರು.
ಜೆಡಿಎಸ್‍ನ ಮುಖಂಡ ರಮೇಶ್‍ಬಾಬು ಎಸಿಬಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನಾವು ಲೋಕಾಯುಕ್ತವನ್ನು ಬಲ ಪಡಿಸುತ್ತೇವೆ. ಎಸಿಬಿಯನ್ನು ಮುಚ್ಚುತ್ತೇವೆ ಎಂದು ಹೇಳಿದ್ದು ನಿಜ. ಆದರೆ, ಇತ್ತೀಚೆಗೆ ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಎಸಿಬಿಯನ್ನು ಮುಚ್ಚುವುದಿಲ್ಲ ಎಂದು ಹೇಳಿಕೆ ನೀಡಿದೆ. ಈ ಲೋಪಕ್ಕೆ ಕಾರಣ ಏನು ಎಂದು ಚರ್ಚೆ ಮಾಡುತ್ತೇವೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ