ಉತ್ತರ ಕರ್ನಾಟಕದ ಗ್ರಾಮ ದತ್ತು ಪಡೆಯಲು ಸತೀಶ್ ನೀನಾಸಂ ಚಿಂತನೆ!

ಧಾರವಾಡ: ಮುಂಬರುವ ದಿನದಲ್ಲಿ ಉತ್ತರ ಕರ್ನಾಟಕದ ಗ್ರಾಮವನ್ನು ದತ್ತು ತೆಗೆದುಕೋಳಲು ಚಿಂತನೆ ನಡೆಸುತ್ತಿದ್ದೇನೆ ಎಂದು ಖ್ಯಾತ ಚಿತ್ರನಟ ಸತೀಶ್ ನೀನಾಸಂ ಹೇಳಿದ್ದಾರೆ.
ಇದಾಗಲೇ ಮಂಡ್ಯ ಜಿಲ್ಲೆ ಹುಲ್ಲೇಗಾರ ಗ್ರಾಮ ದತ್ತು ಪಡೆದಿದ್ದು ಅಲ್ಲಿನ ಅಭಿವೃದ್ದಿ ಕಾರ್ಯದ ಕುರುತು ಕೆಲಸ ಮಾಡುತ್ತಿದ್ದೇನೆ. ಇದೀಗ ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಹಿಂದುಳಿದ ಗ್ರಾಮವೊಂದನ್ನು ದತ್ತು ಪಡೆಯಬೇಕೆಂದು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
“ಅಯೋಗ್ಯ” ಚಲನಚಿತ್ರ 25  ದಿನಗಳ ಯಶಸ್ವಿ ಪ್ರದರ್ಶನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಟ ಸುದ್ದಿಗೋಷ್ಠಿ ನಡೆಸಿದ್ದರು.
“ಅಯೋಗ್ಯ” ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ.ವಾರದಲ್ಲಿ 12.82 ಕೋಟಿ ರು. ಗಳಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.
ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಸಮಸ್ಯೆಗಳಾದ ಬಯಲು ಬಹಿರ್ದೆಡೆ ಕುರಿತು ತೋರಿಸಲಾಗಿದೆ. ಹೀಗೆ ಬಯಲಿಗೆ ಹೋದ ಹೆಣ್ಣು ಮಗಳ ಮೇಲೆ ಆಗುವ ಅತ್ಯಾಚಾರದ ಕಥೆ ಹೊಂದಿರುವ ಚಿತ್ರ ಉತ್ತರ ಕರ್ನಾಟಕದ ಜನರಿಗೆ ಮೆಚ್ಚುಗೆಯಾಗಿದೆ. ಇದೊಂದು ಸಾಮಾಜಿಕ ಕಳಕಳಿಯ ಚಿತ್ರವಾಗಿದ್ದು ಜನರು ಮೆಚ್ಚಿಕೊಂಡಿದ್ದಾರೆ ಎಂದರು.
ಡಬಲ್ ಮೀನಿಂಗ್ ಇಲ್ಲ!
ಡಬಲ್ ಮೀನಿಂಗ್ ಸಿನಿಮಾ ಮಾಡುವುದು ನನ್ನ ಉದ್ದೇಶವಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ಅದಕ್ಕಾಗಿ ಎಷ್ಟು ಸಾಧ್ಯವೋ ಅಷ್ಟು ಅಂತಹಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ನಿರಾಕರಿಸುತ್ತೇನೆ.ಚಿತ್ರದ ಕಥೆಗೆ ಅದು ನೈಜತೆಯ ಸ್ವರೂಪ ನಿಡುತ್ತಿದ್ದ ಪಕ್ಷದಲ್ಲಿ ಮಾತ್ರ ಇಂತಹಾ ಡೈಲಾಗ್ ಗೆ ಒಪ್ಪಿಕೊಳ್ಳುವುದು ನನ್ನ ಜಾಯಮಾನ ಎಂದು ಸತೀಶ್ ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ