ನವದೆಹಲಿ: ಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಜಸ್ಟಿಸ್ ರಂಜನ್ ಗೊಗೋಯ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಶಿಫಾರಸು ಮಾಡಿ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಸಿಜೆಐ ಮಿಶ್ರಾ ಅವರ ಅಧಿಕಾರಾವಧಿ ಅಕ್ಟೋಬರ್ 2ಕ್ಕೆ ಕೊನೆಗೊಳ್ಳಲಿದೆ. ಆ.3ರಂದು ರಂಜನ್ ಗೊಗೋಯ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಸೇವಾ ಜ್ಯೇಷ್ಠತೆ ಹಿನ್ನಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಗೋಗೋಯ್ ಅವರನ್ನು ಶಿಫಾರಸು ಮಾಡಲಾಗಿದೆ. ಮಿಶ್ರಾ ಅವರ ಪತ್ರದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟಿಸ್ ಗೊಗೋಯ್ ಅವರನ್ನು ನೇಮಿಸಲಿದ್ದಾರೆ. ಸಿಜೆಐ ದೀಪಕ್ ಮಿಶ್ರಾ ನಿವೃತ್ತಿಯಾದ ಮರುದಿನ (ಅಕ್ಟೋಬರ್ 3) ಜಸ್ಟಿಸ್ ಗೊಗೋಯ್ ಅವರು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನ್ಯಾಯಮೂರ್ತಿ ಗೊಗೊಯ್ ಅವರು 2019ರ ನವೆಂಬರ್ 17ರ ವರೆಗೂ ಮುಖ್ಯ ನ್ಯಾಯಮೂರ್ತಿ ಸ್ಥಾನ ನಿರ್ವಹಿಸಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಪ್ರಸ್ತುತ ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ) ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ರಂಜನ್ ಗೊಗೊಯ್, ಈ ಹಿಂದೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದರು. ಮೆದು ಮಾತಿನ, ಆದರೆ ಅತ್ಯಂತ ಕಠಿಣ ನ್ಯಾಯಮೂರ್ತಿ ಎಂದು ಹೆಸರಾಗಿರುವ ನ್ಯಾಯಮೂರ್ತಿ ಗೊಗೊಯ್, 2012ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
1954ರಲ್ಲಿ ಜನಿಸಿದ ಅವರು, 1978ರಲ್ಲಿ ವಕೀಲರಾಗಿ ಕಾರ್ಯಾರಂಭಿಸಿದರು. 2001ರ ಫೆಬ್ರುವರಿ 28ರಂದು ಗುವಾಹಟಿ ಹೈ ಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಲ್ಲಿಂದ 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ಗೆ ವರ್ಗಾವಣೆಯಾಗಿ 2011ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದರು.
ಪ್ರಜಾಪ್ರಭುತ್ವದ ರಕ್ಷಣೆಗಾಗಿ ‘ಕೆಲವು ಬಾರಿ ಗದ್ದಲವೆಬ್ಬಿಸುವ ನ್ಯಾಯಾಧೀಶರು ಮತ್ತು ಸ್ವತಂತ್ರ ಪತ್ರಕರ್ತರ’ ಅಗತ್ಯವಿದೆ ಎಂಬ ವಾದವನ್ನು ಜಸ್ಟಿಸ್ ಗೊಗೋಯ್ ಜುಲೈನಲ್ಲಿ ಸಮರ್ಥಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್ನಲ್ಲಿ ಕ್ರಾಂತಿಯೇ ಆಗಬೇಕಾಗಿದ್ದು, ಬರೀ ಸುಧಾರಣೆಯಷ್ಟೇ ಸಾಲದು ಎಂದು ಅವರು ಪ್ರತಿಪಾದಿಸಿದ್ದರು.