ಮಾಧವ ಜನಿಸಿದ ಯಾದವ ಕುಲದಲ್ಲಿ ಹುಟ್ಟಿದ ಎಲ್ಲರೂ ಅಕ್ಷರಸ್ಥರಾಗಬೇಕು: ಶಶಿಧರ ಮಾಡ್ಯಾಳ

ಹುಬ್ಬಳ್ಳಿ: ಸಕಲ ದೇವಾದಿದೇವತೆಗಳು, ಪಂಡಿತರು ಹಾಗೂ ಪಾಮರರಿಂದಲೂ ಪೂಜಿತನಾಗುವ ವಿಷ್ಣುವಿನ ಅವತರವಾದ ಶ್ರೀಕೃಷ್ಣ ಜನನಿಸಿದ ಯಾದವ ಕುಲದಲ್ಲಿ ಹುಟ್ಟಿದ ಎಲ್ಲಾ ಮಕ್ಕಳಿಗೂ ಶಿಕ್ಷಣ ಲಭಿಸಬೇಕು. ಎಲ್ಲರೂ ಶಿಕ್ಷಣ ಪಡೆದು ಅಕ್ಷರಸ್ಥರಾಗಬೇಕು ಎಂದು ಹುಬ್ಬಳ್ಳಿ ತಹಶೀಲದಾರರಾದ ಶಶಿಧರ ಮಾಡ್ಯಾಳ ಹೇಳಿದರು. 

ತಾಲೂಕು ಆಡಳಿತ, ಶ್ರೀಕೃಷ್ಣ ಯಾದವ ಹಾಗೂ ಗೊಲ್ಲರ ಅಭಿವೃದ್ಧಿ ಸಂಘದ ಸಹಯೋಗದೊಂದಿಗೆ ಹುಬ್ಬಳ್ಳಿ ನಗರದ ವೀರಾಪುರ ಓಣಿಯ ಗೊಲ್ಲರ ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದಲ್ಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬೇರೆ ಇತರೆ ಸಮುದಾಯಗಳಂತೆ ಗೊಲ್ಲ ಸಮುದಾಯವು ಸಮಾಜದ ಮುಖ್ಯ ಭೂಮಿಕೆ ಬರಬೇಕು. ಅರ್ಥವಿಲ್ಲದ ಹಾಗೂ ನಾಗರಿಕ ಸಮಾಜದಲ್ಲಿ ಮನ್ನಣೆ ಇಲ್ಲದ ಆಚರಣೆಗಳನ್ನು ತೊರೆಯಬೇಕು. ಸರ್ಕಾರ ಇಂದು ಹಲವಾರು ಯೋಜನೆಗಳನ್ನು ಬಡವರ ಏಳಿಗೆಗಾಗಿ ಜಾರಿಗೆ ತಂದಿದೆ. ಉಚಿತ ಹಾಗೂ ಕಡ್ಡಾಯ ಶಿಕ್ಷಣ ಲಭ್ಯವಿದೆ. ಸಮುದಾಯದ ಎಲ್ಲಾ ಮಕ್ಕಳು ಹಾಗೂ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ನೀಡಿ, ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯವನ್ನು ಕಲ್ಪಿಸಿ ಎಂದರು.

ಸಮುದಾಯ ಭವನ ನಿರ್ಮಾಣದ ಕುರಿತು ಜಿಲ್ಲೆಯ ಎಲ್ಲಾ ಗೊಲ್ಲ ಸಮುದಾಯದವರು ಸೇರಿ ಚರ್ಚಿಸಿ, ಸೂಕ್ತ ಜಾಗವನ್ನು ಗುರುತಿಸಿ ತಾಲೂಕು ಆಡಳಿತಕ್ಕೆ ಮನವಿ ನೀಡಿದರೆ, ಮನವಿಯನ್ನು ಸೂಕ್ತ ಕ್ರಮಕಾಗಿ ಜಿಲ್ಲಾ ಆಡಳಿತ ಹಾಗೂ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮುದಾಯದ ಮುಖಂಡರುಗಳಾದ ರಂಗಸ್ವಾಮಿ, ಶ್ರೀನಿವಾಸ, ಗೋಪಾಲ ಗೊಲ್ಲರ್, ಹುಲಿಗೆಪ್ಪ ಗೊಲ್ಲರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪೂಜೆ ಹಾಗೂ ವೇದಿಕೆ ಕಾರ್ಯಕ್ರಮದ ನಂತರ ಕೃಷ್ಣನ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕೃಷ್ಣ ಹಾಗೂ ರಾಧೆಯರ ವೇಷ ತೊಟ್ಟಮಕ್ಕಳು ಮೆರವಣೆಗೆಯಲ್ಲಿ ಭಾಗವಹಿಸಿದ್ದರು.  ಇದಕ್ಕೂ ಮುನ್ನ ಹುಬ್ಬಳ್ಳಿ ಮಿನಿ ವಿಧಾನ ಸೌಧದಲ್ಲಿ ಸಾಂಕೇತಿಕವಾಗಿ ಕೃಷ್ಣ ಭಾವಚಿತ್ರಕ್ಕೆ ಪೂಜೆ ಸಲಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ