ಬಾಂಗ್ಲಾ ಕ್ರಿಕೆಟಿಗ ಸಬ್ಬೀರ್ ರೆಹಮಾನ್ ಗೆ ಮತ್ತೆ 6 ತಿಂಗಳ ನಿಷೇಧ

ಢಾಕಾ: ಟೆನ್ನಿಸ್ ತಾರೆ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕ್ರಿಕೆಟಿಗ ಸಬ್ಬೀರ್ ರೆಹಮಾನ್ ಗೆ ಮತ್ತೆ 6 ತಿಂಗಳ ನಿಷೇಧ ಹೇರಿ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆ ಆದೇಶ ಹೊರಡಿಸಿದೆ.

ಈ ಬಗ್ಗೆ ಬಾಂಗ್ಲಾ ಕ್ರಿಕೆಟ್ ಸಂಸ್ಥೆಯ ಶಿಸ್ತು ಪಾಲನಾ ಸಮಿತಿ ಆದೇಶ ನೀಡಿದ್ದು, ಸಬ್ಬೀರ್ ರೆಹಮಾನ್ ಗೆ 6 ತಿಂಗಳ ಕಾಲ ನಿಷೇಧ ಹೇರಿದೆ. ಈ ಹಿಂದೆ ಖಾಸಗಿ ಹೊಟೆಲ್ ಗೆ ಅನುಮತಿ ಇಲ್ಲದೇ ಮಹಿಳೆಯನ್ನು ಕರೆತಂದು ಕೊಠಡಿಯೊಳಗೆ ಇರಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಸಬ್ಬೀರ್ ರೆಹಮಾನ್ 6 ತಿಂಗಳ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಈ ಶಿಕ್ಷೆಯೇ ಇನ್ನೂ ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಮತ್ತೆ ಸಬ್ಬೀರ್ ನಿಷೇಧ ಶಿಕ್ಷೆಗೆ ಗುರಿಯಾಗಿದ್ದಾರೆ.

ವಿವಾದಗಳಿಂದಲೇ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬಾಂಗ್ಲಾದೇಶದ ಕ್ರಿಕೆಟಿಗರಾದ ಸಬ್ಬೀರ್ ರೆಹಮಾಮ್ ಮತ್ತು ಮೊಸದೆಕ್ ಹುಸೇನ್ ವಿಚಾರಣೆಗಾಗಿ ಬಾಂಗ್ಲಾ ಕ್ರಿಕೆಟ್ ಸಂಸ್ಥೆ ಶಿಸ್ತು ಪಾಲನಾ ಸಮಿತಿ ನೇಮಕ ಮಾಡಿತ್ತು. ಇದೀಗ ಈ ಸಮಿತಿ ತನ್ನ ವಿಚಾರಣೆ ಪೂರ್ಣಗೊಳಿಸಿದ್ದು, ಇಬ್ಬರ ಪೈಕಿ ಸಬ್ಬೀರ್ ರೆಹಮಾನ್ ವಿರುದ್ಧ ಶಿಕ್ಷೆ ಪ್ರಕಟಿಸಿದೆ. ಸಬ್ಬೀರ್ ರೆಹಮಾನ್ ವಿರುದ್ಧ 2 ಆರೋಪಗಳಿಗೆ ಸಂಬಂಧಿಸಿದಂತೆ ಶಿಸ್ತು ಪಾಲನಾ ಸಮಿತಿ ಶಿಕ್ಷೆ ಪ್ರಕಟಿಸಿದ್ದು, ಇದರಲ್ಲಿ ಸಾನಿಯಾ ಮಿರ್ಜಾಗೆ ಕಿರುಕುಳ ನೀಡಿದ ಪ್ರಕರಣ ಕೂಡ ಸೇರಿದೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಬಿ ನಿರ್ದೇಶಕ ಇಸ್ಮಾಯಿಲ್ ಹೈದರ್ ಅವರು, ಸಬ್ಬೀರ್ ರೆಹಮಾನ್ ವಿರುದ್ಧ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಆರು ತಿಂಗಳ ನಿಷೇಧ ಹೇರುವಂತೆ ಶಿಸ್ತುಪಾಲನಾ ಸಮಿತಿ ಶಿಫಾರಸ್ಸು ಮಾಡಿದೆ. ಹೀಗಾಗಿ ಸಬ್ಬೀರ್ ರೆಹಮಾನ್ ವಿರುದ್ಥ 6 ತಿಂಗಳ ನಿಷೇಧ ಹೇರಲಾಗಿದೆ. ಮತ್ತೆ ಇಂತಹುದೇ ಘಟನೆ ಮುಂದುವರೆದರೆ ದೀರ್ಘಕಾಲದ ನಿಷೇಧ ಹೇರುವ ಕುರಿತು ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ