ಬೆಂಗಳೂರು, ಸೆ.1-ನಿವೇಶನ ರಹಿತರಿಗಾಗಿ ಮೀಸಲಿಟ್ಟಿದ್ದ ನಿವೇಶನಗಳನ್ನು ಸೈಬರ್ಟೆಕ್ ಪಾರ್ಕ್ಗೆ ನೋಂದಣಿ ಮಾಡಿಕೊಡುವ ಮೂಲಕ ದಕ್ಷಿಣ ವಿಭಾಗದ ತಹಶೀಲ್ದಾರ್ ಬಡವರಿಗೆ ವಂಚನೆ ಮಾಡಿದ್ದಾರೆ ಎಂದು ಕರ್ನಾಟಕ ರಿಪಬ್ಲಿಕ್ ಸೇನೆ ರಾಜ್ಯಾಧ್ಯಕ್ಷ ಜಿಗಣಿ ಶಂಕರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ದೊಡ್ಡ ನಾಗಮಂಗಲ ಗ್ರಾಮದ ಸರ್ವೆ ನಂಬರ್ 11 ರಲ್ಲಿ ಒಟ್ಟು 29.39 ಎಕರೆ ಜಮೀನಿನ ಪೈಕಿ ಈ ಹಿಂದೆ 19.18 ಎಕರೆ ಜಮೀನು ಹಾಗೂ ಇತರೆಯವರಿಗೆ ಕೊಟ್ಟು, ಉಳಿಕೆ 2.01 ಎಕರೆ ಜಮೀನನ್ನು ವಸತಿ ಹೀನ ಬಡವರಿಗೆ ನೀಡಲು ಕರ್ನಾಟಕ ಪ್ರಗತಿಪರ ಚಳವಳಿಗಾರರ ಸಮಿತಿ ಹಾಗೂ ದಲಿತಪರ ಸಂಘ-ಸಂಸ್ಥೆಗಳು ಸೇರಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿತ್ತು ಎಂದು ಹೇಳಿದರು.
ಅದರಂತೆ 2017ರಲ್ಲಿ ಅಂದಿನ ಸಿಎಂ ಜಿಲ್ಲಾಧಿಕಾರಿಗಳು ಹಾಗೂ ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಭೂಮಿ ಲಭ್ಯತೆ ಬಗ್ಗೆ ಅಗತ್ಯ ದಾಖಲೆ ನೀಡುವಂತೆ ಆದೇಶಿಸಿದ್ದರು.
ಭೂಮಿ ಮಂಜೂರಾತಿಗೆ ಅಗತ್ಯ ಅರ್ಹ ದಾಖಲೆಗಳು ಹಾಗೂ ಸ್ಥಳ ತನಿಖೆ ಇತ್ಯಾದಿ ಸಂಬಂಧ ದಕ್ಷಿಣ ವಿಭಾಗದ ತಹಶೀಲ್ದಾರ್ ಅವರು ಆಶ್ರಯ ಯೋಜನೆಗೆ ಅಗತ್ಯ ಅರ್ಹತೆ ಬಗ್ಗೆ ಸ್ಕೆಚ್ ಸರ್ವೆ ಮಾಡಿಸಿ ದಾಖಲೆ ನೀಡಿದ್ದರು. ಆದರೆ 2.1 ಎಕರೆ ಜಮೀನನ್ನು ಬೆಂಗಳೂರು ದಕ್ಷಿಣ ತಾಲೂಕು ತಹಶೀಲ್ದಾರ್ ಬಂಡವಾಳಶಾಹಿಗಳೊಂದಿಗೆ ಶಾಮೀಲಾಗಿ ಇದೇ ಆಗಸ್ಟ್ 28 ರಂದು ಸೂಪರ್ ಸೈಬರ್ ಟೆಕ್ಪಾರ್ಕ್ ಅವರಿಗೆ ಬೆಂಗಳೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂದು ಜಿಗಣಿಶಂಕರ್ ಆರೋಪಿಸಿದರು.
ಬಡವರಿಗಿಟ್ಟಿದ್ದ ಭೂಮಿಯನ್ನು ಬೇರೆಯವರಿಗೆ ಕೊಟ್ಟಿರುವುದು ಸರಿಯಲ್ಲ. ತಕ್ಷಣ ಸರ್ಕಾರ ಈ 2.1 ಎಕರೆ ಜಮೀನನ್ನು ವಾಪಸ್ ಪಡೆದು ಇಲ್ಲಿನ ಬಡವರಿಗೆ ನೀಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಗತಿಪರ ಚಳವಳಿಗಾರರ ಸಮಿತಿ ರಾಜ್ಯಾಧ್ಯಕ್ಷ ಪಿ.ರಾಜಣ್ಣ, ಅಂಬೇಡ್ಕರ್ ಯುವ ಸೇನೆಯ ರಾಜ್ಯಾಧ್ಯಕ್ಷ ಕೋದಂಡರಾಮ್, ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ಮತ್ತಿತರರು ಉಪಸ್ಥಿತರಿದ್ದರು.