ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕೈ ಮುಖಂಡರು ರಣತಂತ್ರ

ಬೆಂಗಳೂರು, ಸೆ.1- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯನ್ನು ಹಿಮ್ಮೆಟ್ಟಿಸಿ ರಾಜ್ಯದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಳ್ಳುವ ಬಗ್ಗೆ ಕೈ ಮುಖಂಡರು ರಣತಂತ್ರ ರೂಪಿಸುತ್ತಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೇರುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಪ್ರಬಲ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸಮರ್ಥ ಕೈ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲುವು ಸಾಧಿಸುವ ಕುರಿತಂತೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

ಈಗಾಗಲೇ 2019ರ ಮಹಾಸಮರಕ್ಕೆ ಸಿದ್ಧರಾಗುವಂತೆ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪಕ್ಷದ ಉಸ್ತುವಾರಿ ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಂಸದರು, ಶಾಸಕರು, ಸಚಿವರು, ಜಿಲ್ಲಾಧ್ಯಕ್ಷರು, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿ ಮಹತ್ವದ ಚರ್ಚೆ ನಡೆಸಿದರು.
ಜಿಲ್ಲಾವಾರು ಪ್ರತ್ಯೇಕ ಸಭೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹ, ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ದೇಶಾದ್ಯಂತ ಇರುವ ಮೋದಿ ಅಲೆಯನ್ನು ಕುಗ್ಗಿಸಿ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ದೇಶಾದ್ಯಂತ ಪ್ರಚುರಪಡಿಸಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ದೇಶದ ಚುಕ್ಕಾಣಿ ಹಿಡಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾಯಕರು ಇಂದು ಚರ್ಚೆ ನಡೆಸಿದರು.

ತಳಮಟ್ಟದ ಕಾರ್ಯಕರ್ತರನ್ನು ಹುರಿದುಂಬಿಸಿ ಜನರಲ್ಲಿ ಜಾಗೃತಿ ಮೂಡಿಸಿ ಮತಗಳನ್ನು ಸೆಳೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾಯಕರು ಚರ್ಚಿಸಿದರು.
ಹಾಲಿ ಇರುವ 9 ಲೋಕಸಭೆ ಸ್ಥಾನಗಳ ಜತೆಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಇದಕ್ಕಾಗಿ ಜಾತ್ಯತೀತ ಶಕ್ತಿಗಳ ಜತೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಜೆಡಿಎಸ್ ಜತೆ ಸೇರಿ ಮೈತ್ರಿ ಸರ್ಕಾರ ಮಾಡಿದ್ದು, ಜೆಡಿಎಸ್ ಜತೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು. ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲಲು ಅವಕಾಶವಾಗದಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಯಿತು.
ಮೈತ್ರಿ ಸರ್ಕಾರ ಮಾಡಿರುವ ರೈತರ ಸಂಪೂರ್ಣ ಸಾಲಮನ್ನಾ, ಹಿಂದಿನ ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ, ಕ್ಷೀರಭಾಗ್ಯ, ಇಂದಿರಾ ಕ್ಯಾಂಟಿನ್ ಮುಂತಾದ ಯೋಜನೆಗಳನ್ನು ಮುಂದುವರಿಸಿರುವುದರ ಲಾಭವನ್ನು ಚುನಾವಣೆಯಲ್ಲಿ ಪಡೆಯುವುದರ ಬಗ್ಗೆಯೂ ಕೂಡ ಸಭೆಯಲ್ಲಿ ಚರ್ಚಿಸಲಾಯಿತು.

ಬಿಜೆಪಿಯವರ ಅಪಪ್ರಚಾರಗಳನ್ನು ಹತ್ತಿಕ್ಕುವ ಬಗ್ಗೆಯೂ ಚರ್ಚಿಸಲಾಯಿತು. ಭಾವನಾತ್ಮಕ ವಿಷಯಗಳು, ಕೋಮು ಭಾವನೆ ಸೃಷ್ಟಿಸುವ ಕೆಲಸ ಮಾಡುವ ಬಗ್ಗೆ ಎಚ್ಚರದಿಂದ ಇರಬೇಕು. ಈ ಬಗ್ಗೆ ಜನರನ್ನು ಜಾಗೃತಿಗೊಳಿಸಬೇಕು. ಪಕ್ಷ ಸಂಘಟನೆಯನ್ನು ಬಲಗೊಳಿಸಬೇಕು. ಬ್ಲಾಕ್ ಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಶಕ್ತಿಯುತಗೊಳಿಸಬೇಕು. ಒಟ್ಟಾರೆ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಗೊಂದಲವಾಗದಂತೆ ಎಚ್ಚರಿಕೆಯ ಹೆಜ್ಜೆಯನ್ನಿಟ್ಟು ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬುದರ ಬಗ್ಗೆ ಮಹತ್ವದ ಚರ್ಚೆ ನಡೆದಿದೆ.
ಜಿಲ್ಲಾವಾರು ಪ್ರತ್ಯೇಕ ಸಭೆ: ಮುಖಂಡರು ಚುನಾವಣೆ ಸಂಬಂಧ ಜಿಲ್ಲಾವಾರು ಪ್ರತ್ಯೇಕ ಸಭೆಗಳನ್ನು ನಡೆಸಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಪ್ರಬಲವಾಗಿ ಕೇಳಿಬಂತು. ಶಿವರಾಜ್ ತಂಗಡಿ, ಬಸವನಗೌಡ ಬಾದರ್ಲಿ, ರಾಘವೇಂದ್ರ ಹಿಟ್ನಾಳ್ ಮುಂತಾದವರು ಸಿದ್ದರಾಮಯ್ಯನವರು ಸ್ಪರ್ಧಿಸಬೇಕೆಂದು ಆಗ್ರಹಿಸಿದರು.

ಸಿದ್ದರಾಮಯ್ಯನವರು ಸ್ಪರ್ಧೆಗೆ ಸದ್ಯಕ್ಕೆ ಸಹಮತ ವ್ಯಕ್ತಪಡಿಸಲಿಲ್ಲ. ಬಸವನಗೌಡ ಬಾದರ್ಲಿ, ವಿರೂಪಾಕ್ಷಪ್ಪ, ಕರಿಯಣ್ಣ, ಬಸವರಾಜ ರಾಯರೆಡ್ಡಿ ಸೇರಿದಂತೆ ಏಳು ಜನ ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳಿದ್ದು , ಸಿದ್ದರಾಮಯ್ಯ ಬರುವುದಾದರೆ ನಾವೆಲ್ಲ ಹಿಂದೆ ಸರಿದು ಅವಕಾಶ ಮಾಡಿಕೊಡುವುದಾಗಿ ಹೇಳಿದರು.
ಸಿದ್ದರಾಮಯ್ಯನವರು ಈ ಸಂದರ್ಭದಲ್ಲಿ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದರೂ ಜನ ಮನ್ನಣೆ ನೀಡಲಿಲ್ಲ. ಹೀಗಾಗಿ ನಾನು ಸದ್ಯ ಏನೂ ಹೇಳುವುದಿಲ್ಲ ಎಂದು ಹೇಳಿದರು.

ನಂತರ ಬಳ್ಳಾರಿ ಜಿಲ್ಲಾ ಮುಖಂಡರ ಸಭೆ ನಡೆಸಲಾಯಿತು. ಆರು ಜನ ಕಾಂಗ್ರೆಸ್ ಶಾಸಕರಿದ್ದು, ಎಲ್ಲರೂ ಒಟ್ಟಾಗಿ ಅಭ್ಯರ್ಥಿ ಆಯ್ಕೆ ಮಾಡಿದರೆ ಗೆಲುವು ಸುಲಭ ಸಾಧ್ಯವಾಗುತ್ತದೆ. ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು.
ಅದೇ ರೀತಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳ ಬಗ್ಗೆಯೂ ಚರ್ಚಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ