ಮಂಗಳೂರು, ಆ. 31-ಕೇರಳ ಹಾಗೂ ಕೊಡಗು ಪ್ರವಾಹದ ಸಂತ್ರಸ್ತರ ಸಂಕಷ್ಟಕ್ಕೆ ಮರುಗಿದ 2ನೇ ತರಗತಿಯ ಪುಟ್ಟ ಬಾಲಕನೊಬ್ಬ ತನ್ನ ಹುಂಡಿಯ ಹಣವನ್ನು ನೀಡಿದ್ದಾನೆ.
ಸುರತ್ಕಲ್ ಕಾಟಿಪಳ್ಳ ನಾರಾಯಣ ಗುರು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ಹಿಶಾಮ್ ನೆರವು ನೀಡಿದ ಬಾಲಕ.
ಕೃಷ್ಣಾಪುರ ನಿವಾಸಿ ಬಿ.ಕೆ. ಹಿದಾಯತ್ ಕಡೂರು ಅವರ ಪುತ್ರನಾಗಿರುವ ಈತನಿಗೆ ತಂದೆ, ಕೆಲವು ತಿಂಗಳ ಹಿಂದೆ ಹಣ ಉಳಿತಾಯದ ಬಗ್ಗೆ ತಿಳಿಸಿ, ಪ್ಲಾಸ್ಟಿಕ್ ಡಬ್ಬಿಯೊಂದನ್ನು ನೀಡಿದ್ದರು. ಹಿಶಾಮ್ ಈ ಡಬ್ಬಿಯಲ್ಲಿ ತನಗೆ ಸಿಕ್ಕಿದ ಚಿಲ್ಲರೆ ಹಣಗಳನ್ನು ಹಾಕಿ, ಉಳಿತಾಯ ಮಾಡುತ್ತಾ ಬಂದಿದ್ದನು. ಈ ಡಬ್ಬಿ ತುಂಬುತ್ತಾ ಬಂದಿತ್ತು.
ಈ ಮಧ್ಯೆ ಇತ್ತೀಚೆಗೆ ಕೇರಳ ಮತ್ತು ಕೊಡಗಿನಲ್ಲಿ ಉಂಟಾದ ಭೂಕುಸಿತ ಮತ್ತು ಪ್ರವಾಹವನ್ನು ಟಿವಿಯಲ್ಲಿ ವೀಕ್ಷಿಸಿದ್ದ ಹಿಶಾಮ್, ಸಂತ್ರಸ್ತರ ಸಂಕಷ್ಟಕ್ಕೆ ನೆರವಾಗಬೇಕೆಂದು ಭಾವಿಸಿ ಹುಂಡಿಯಲ್ಲಿ ಕೂಡಿಟ್ಟಿದ್ದ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ತನ್ನ ತಂದೆ ಬಳಿ ಹೇಳಿಕೊಂಡಿದ್ದಾರೆ.
ಮಗನ ಈ ಹೃದಯವಂತಿಕೆಯಿಂದ ಸಂತೋಷಗೊಂಡ ತಂದೆ ಮರುದಿವಸವೇ ಮಗನೊಂದಿಗೆ ವಾರ್ತಾ ಇಲಾಖೆ ಕಚೇರಿಗೆ ಬಂದು ಉಳಿತಾಯದ ಡಬ್ಬಿಯನ್ನು ವಾರ್ತಾ ಇಲಾಖೆ ಅಧಿಕಾರಿ ಬಿ.ಎ.ಖಾದರ್ ಶಾ ಅವರಿಗೆ ನೀಡಿದ್ದಾರೆ.