ಬೆಂಗಳೂರು, ಆ.28- ಸರ್ಕಾರಿ ಜಾಗ ಮತ್ತು ರಾಜಕಾಲುವೆ ಒತ್ತುವರಿ ಮಾಡಿದವರ ವಿರುದ್ಧ ಗದಾಪ್ರಹಾರ ನಡೆಸಿದ ಬಿಬಿಎಂಪಿ ಮಾದರಿಯಲ್ಲೇ ಇದೀಗ ಬಿಡಿಎ, ತನ್ನ ಜಾಗವನ್ನು ಅತಿಕ್ರಮಿಸಿದವರ ವಿರುದ್ಧ ಕಾರ್ಯಾಚರಣೆ ನಡೆಸಲು ಸಿದ್ಧತೆ ನಡೆಸಿದೆ.
ಬಿಡಿಎ ನಿರ್ಮಿತ ಬಡಾವಣೆಗಳಲ್ಲಿ ಉದ್ಯಾನ, ಮೈದಾನ ಹಾಗೂ ಸಾರ್ವಜನಿಕ ಅನುಕೂಲಕ್ಕೆ ಮೀಸಲಿಟ್ಟ ಸಿಎ ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಈ ಬಾರಿ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಲಿದೆ.
ಮಳೆಯಿಂದಾಗುವ ಪ್ರವಾಹ ತಡೆಯಲು ಬಿಬಿಎಂಪಿ ರಾಜಕಾಲುವೆ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿವೆ. ಆಗಾಗ ಬಿಬಿಎಂಪಿಯ ಬುಲ್ಡೋಜರ್‍ಗಳು ಗರ್ಜಿಸಿ ಒತ್ತುವರಿ ತೆರವು ಮಾಡುತ್ತಲೆ ಇವೆ. ಈ ಮಧ್ಯೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವವರಿಗೆ ಪಾಠ ಕಲಿಸಲು ಮುಂದಾಗಿರುವ ಬಿಡಿಎ, ಒತ್ತುವರಿ ಪತ್ತೆಗೆ ಸಮೀಕ್ಷೆ ನಡೆಸಲು ನಿರ್ಧರಿಸಿದೆ. ಅದರಂತೆ 20 ಸರ್ವೇಯರ್ ಸೇರಿ ಸರ್ವೆ ಮೇಲುಸ್ತುವಾರಿ ಮಾಡುವವರನ್ನು ನೇಮಿಸಲಾಗುತ್ತಿದೆ. ಈ ಕಾರ್ಯ ಭರದಿಂದ ನಡೆಯುತ್ತಿದ್ದು ಬಿಡಿಎ ಜಾಗ ಒತ್ತುವರಿದಾರರು ಪರಿತಪಿಸಬೇಕಾದ ಪರಿಸ್ಥಿತಿ ಬಂದಿದೆ.
3 ತಿಂಗಳಲ್ಲಿ ಸರ್ವೆ ಕಾರ್ಯ:
ಒತ್ತುವರಿ ತೆರವಿಗೂ ಮೊದಲು, ಬಿಡಿಎ ಅಧಿಕಾರಿಗಳು ಭೂಮಿ ಲೆಕ್ಕಪರಿಶೋಧನೆ (ಲ್ಯಾಂಡ್ ಆಡಿಟ್) ಮಾಡಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಸೂಕ್ತ ಏಜೆನ್ಸಿ ನೇಮಿಸಲು ಟೆಂಡರ್ ಕರೆಯಲಾಗಿದ್ದು, ಆ ಸಂಸ್ಥೆ ಬಿಡಿಎ ಮತ್ತು ಬಿಡಿಎಯಿಂದ ಅನುಮತಿ ಪಡೆದು ಖಾಸಗಿಯವರು ನಿರ್ಮಾಣ ಮಾಡಿದ ಬಡಾವಣೆಗಳ ಸಮೀಕ್ಷೆ ಮಾಡಲಿದೆ. 3 ತಿಂಗಳೊಳಗಾಗಿ ಸಂಸ್ಥೆ ಸರ್ವೆ ಕಾರ್ಯ ನಡೆಸಿ ಬಿಡಿಎಗೆ ವರದಿ ನೀಡಲಿದೆ.
ಸ್ಥಳಾ ಕೃತಿ ಸಮೀಕ್ಷೆ: ಬಿಡಿಎ ರೂಪಿಸಿರುವ ಯೋಜನೆಯಂತೆ ಸ್ಥಳಾಕೃತಿ ಸಮೀಕ್ಷೆ (ಟೋಪೆÇಗ್ರಾಫಿಕಲ್ ಸರ್ವೆ) ನಡೆಸಬೇಕಿದೆ. ಅದರಂತೆ ಬಡಾವಣೆಯಲ್ಲಿನ ನಿವೇಶನ, ಕಟ್ಟಡಗಳ ಯಥಾವತ್ ಸ್ಕೆಚ್ ರೂಪಿಸಲಾಗುತ್ತದೆ. ಅಲ್ಲದೆ, ಬಿಡಿಎ ನೀಡಿದ ಅನುಮತಿ ಹಾಗೂ ಹಾಲಿ ಇರುವ ಬಡಾವಣೆಯ ಸ್ಕೆಚ್‍ನಲ್ಲಿನ ವ್ಯತ್ಯಾಸವನ್ನು ತಾಳೆ ಮಾಡಿ ವರದಿ ಸಿದ್ಧಪಡಿಸಲಾಗುತ್ತದೆ. ಆ ವರದಿಯನ್ನಾಧರಿಸಿ ಬಿಡಿಎ ಒತ್ತುವರಿಯನ್ನು ತೆರವು ಮಾಡುವುದು ಅಥವಾ ಬೇರೆ ಯಾವುದಾದರು ಕ್ರಮ ಕೈಗೊಳ್ಳಲಿದೆ.
ಎಲ್ಲವೂ ಸರ್ವೆ: ಸಮೀಕ್ಷೆ ನಡೆಸುವ ವೇಳೆ ಉದ್ಯಾನ, ಮೈದಾನ, ಸಿಎ ನಿವೇಶ ಹಾಗೂ ಜನರಿಗೆ ಹಂಚಿಕೆಯಾದ ನಿವೇಶನಗಳ ವಿಸ್ತೀರ್ಣವಷ್ಟೇ ಅಲ್ಲದೆ, ಚರಂಡಿ, ರಸ್ತೆ, ಬೇಲಿ ನಿರ್ಮಾಣ, ವಿದ್ಯುತ್ ತಂತಿಗಳು, ನೀರಿನ ಮೂಲಗಳ ವಿಸ್ತೀರ್ಣ, ಒತ್ತುವರಿಯಾಗಿರುವ ಕುರಿತ ಮಾಹಿತಿ ಸಂಗ್ರಹಿಸಿ ಸಮೀಕ್ಷೆ ಮಾಡಬೇಕಿದೆ.
ಅದರ ಜತೆಗೆ ನಿವೇಶನಗಳನ್ನು ಯಾವ ಉದ್ದೇಶಕ್ಕೆ ನೀಡಲಾಗಿದೆ ಎಂಬುದನ್ನು ತಿಳಿಸಬೇಕಿದೆ. ಅದರಂತೆ ವಸತಿ, ವಾಣಿಜ್ಯ, ಕೈಗಾರಿಕೆ, ಸಾರ್ವಜನಿಕ ಬಳಕೆಗೆ ಸಂಬಂಧಿಸಿದ ನಿವೇಶನಗಳು ಅದೇ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂಬುದನ್ನು ಕೂಡ ಅರಿಯಬೇಕಿದೆ. ಅಲ್ಲದೆ, ಬಿಡಿಎ ಮತ್ತು ಖಾಸಗಿ ಬಡಾವಣೆಗಳ ವರದಿಯನ್ನು ಬೇರೆ ಬೇರೆ ಬಣ್ಣಗಳಲ್ಲಿ ನೀಡಬೇಕಿದೆ. ಸಮೀಕ್ಷೆಯಲ್ಲಿ ಬಿಡಿಎಗೆ ಎಲ್ಲಾ ಜಾಗಳ ಸ್ಪಷ್ಟ ಚಿತ್ರಣ ಸಿಗಲಿದೆ.
1.53 ಲಕ್ಷ ನಿವೇಶನ: ಟೆಂಡರ್ ದಾಖಲೆ ಪ್ರಕಾರ ಬಿಡಿಎ ಈವರೆಗೆ 1.53 ಲಕ್ಷ ನಿವೇಶನಗಳನ್ನು ರೂಪಿಸಿದೆ. ಅದರ ಜತೆಗೆ 800 ಸಾರ್ವಜನಿಕ ಉಪಯೋಗಕ್ಕೆ ನಿರ್ಮಿಸಲಾದ ನಿವೇಶನಗಳು, 13,100 ಲಾಟ್ ನಿರ್ಮಿಸಿದೆ. ಅವುಗಳೆಲ್ಲದರ ಸರ್ವೇ ಕಾರ್ಯ ನಡೆಸಲಾಗುತ್ತದೆ. ಸಮೀಕ್ಷೆ ಬಳಿಕ ಅಕ್ರಮ ಯಾವುದು ಎಂಬುದರ ಬಗ್ಗೆ ಮಾಹಿತಿ ಲಭಿಸಲಿದೆ. ಇದನ್ನು ಆಧರಿಸಿ ಮುಂದಿನ ಯೋಜನೆ ರೂಪಿಸಲಾಗುತ್ತದೆ.
ಸರ್ವೇ ಏಕೆ ?:
ಬಿಡಿಎ ನಿರ್ಮಿಸಿದ ಬಡಾವಣೆಗಳಲ್ಲಿನ ಸಿಎ ನಿವೇಶನ ಸೇರಿ ಇನ್ನಿತರ ವಿವಿಧ ಉದ್ದೇಶಕ್ಕೆ ಮೀಸಲಿಟ್ಟ ನಿವೇಶನಗಳನ್ನು ಖಾಸಗಿಯವರು ಅತಿಕ್ರಮ ಮಾಡಿಕೊಂಡಿದ್ದಾರೆ ಹಾಗೂ ಬಿಡಿಎ ಅನುಮತಿ ನೀಡಿದ ಖಾಸಗಿ ಬಡಾವಣೆಗಳಲ್ಲಿ ನಕ್ಷೆಯನ್ನು ಮೀರಿ ಬೇರೆ ಜಾಗ ಮತ್ತು ಸಾರ್ವಜನಿಕ ಬಳಕೆಯ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪವಿದೆ. ಅದನ್ನು ಅರಿಯುವ ಸಲುವಾಗಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.