ಪಿಂಚಣಿ ಪರಿಷತ್ ವತಿಯಿಂದ ಬೃಹತ್ ಮೆರವಣಿಗೆ

 

ಬೆಂಗಳೂರು, ಆ.28- ಕರ್ನಾಟಕ ರಾಜ್ಯ ಪಿಂಚಣಿ ಪರಿಷತ್ ವತಿಯಿಂದ ನಗರದಲ್ಲಿಂದು ಅಸಂಘಟಿತ ವಲಯಕ್ಕೆ ಸಾಮಾಜಿಕ ಭದ್ರತೆ ನೀಡದ ಮಾಸಿಕ ಪಿಂಚಣಿ ಯೋಜನೆ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಬೃಹತ್ ಮೆರವಣಿಗೆ ನಡೆಸಲಾಯಿತು.
ಮೌರ್ಯ ವೃತ್ತದಿಂದ ಆರಂಭಗೊಂಡ ಮೆರವಣಿಗೆ ಸ್ವಾತಂತ್ರ್ಯ ಉದ್ಯಾನವನದವರೆಗೆ ನಡೆಯಿತು. ಮೆರವಣಿಗೆಯಲ್ಲಿ ಪಿಂಚಣಿ ಪರಿಷತ್‍ನ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಪರಿಷತ್‍ನ ಮುಖ್ಯಸ್ಥೆ ಪದ್ಮಾ,
ದೇಶದಲ್ಲಿ ಶೇ. 84ರಷ್ಟು ಜನರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ಯಾವುದೇ ಭದ್ರತೆ ಸಿಗುತ್ತಿಲ್ಲ. ಪಿಂಚಣಿ, ಇಎಸ್‍ಐ ಸೇರಿದಂತೆ ಹಲವು ಸೌಲಭ್ಯಗಳಿಂದಲೂ ಅವರು ವಂಚಿತರಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಹೋರಾಟ ಮಾಡಿ, ಸರ್ಕಾರದ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಾಮಾಜಿಕ ಭದ್ರತೆಯ ಭಾಗವಾದ ಪಿಂಚಣಿ ಸೌಲಭ್ಯವನ್ನು ಸಾರ್ವರ್ತಿಕರಣಗೊಳಿಸಬೇಕು ಎಂದು ಒತ್ತಾಯಿಸಿದರು.

ಅಸಂಘಟಿತ ವಲಯದಲ್ಲಿರುವ ಎಲ್ಲರ ಸಾಮಾಜಿಕ ಭದ್ರತೆ ಮತ್ತು ಘನತೆಯ ಬದುಕಿನ ರಕ್ಷಣೆಗೆ ಬೇಕಾದಷ್ಟು ಮೊತ್ತದ ಮಾಸಿಕ ಪಿಂಚಣಿ ಯೋಜನೆಯನ್ನು ಸರ್ಕಾರವು ಜಾರಿಗೊಳಿಸುವ ಹಕ್ಕೊತ್ತಾಯ ಇಟ್ಟಿದ್ದವು. ಅದರಂತೆಯೇ, ಮನಸ್ವಿನಿ ಹಾಗೂ ಮೈತ್ರಿ ಎಂಬ ಎರಡು ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಧರಣಿನಿರತರು ಹೇಳಿದರು.
ಪಿಂಚಣಿ ಮೊತ್ತವು ಕಾರ್ಮಿಕರ ವೇತನದ ಅರ್ಧದಷ್ಟಿರಬೇಕು ಅಥವಾ ಕನಿಷ್ಠ ಎರಡು ಸಾವಿರ ರೂಪಾಯಿಯಾಗಿರಬೇಕು. 50 ವರ್ಷ ತುಂಬಿದ ಎಲ್ಲ ಮಹಿಳೆಯರಿಗೂ ಮತ್ತು 55 ವರ್ಷ ತುಂಬಿದ ಎಲ್ಲ ಪುರುಷರಿಗೂ ಪಿಂಚಣಿ ಕಡ್ಡಾಯವಾಗಿ ದೊರೆಯಬೇಕು. ಅಲ್ಲದೇ, ಪಿಂಚಣಿಯನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ