ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ ನಾಯಕರಿಗೆ ಬಿಜೆಪಿ ಸೂಚನೆ

 

ಬೆಂಗಳೂರು, ಆ.28- ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗುತ್ತಿರುವ ಭಿನ್ನಮತದ ಪರಿಸ್ಥಿತಿಯ ಲಾಭ ಪಡೆಯಲು ಕಸರತ್ತು ಆರಂಭಿಸಿರುವ ಬಿಜೆಪಿ ರಾಷ್ಟ್ರೀಯ ನಾಯಕರು, ಜೆಡಿಎಸ್ ಬಗ್ಗೆ ಟೀಕೆ ಮಾಡದಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಆ ಪಕ್ಷದ ಯಾವುದೇ ತೀರ್ಮಾನಗಳನ್ನಾಗಲಿ, ಇಲ್ಲವೇ ಆ ಪಕ್ಷದ ನಾಯಕರ ಬಗ್ಗೆ ಸಾರ್ವಜನಿಕವಾಗಿ ಯಾವುದೇ ಟೀಕೆ ಮಾಡದೆ ಮೃದುಧೋರಣೆ ಅನುಸರಿಸುವಂತೆ ಖುದ್ದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ನಿರ್ದೇಶಿಸಿದ್ದಾರೆ.

ಈ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಸೇರಿದಂತೆ ಹಲವು ನಾಯಕರ ಜೊತೆ ದೂರವಾಣಿ ಮೂಲಕ ಅಮಿತ್ ಷಾ ಮಾತನಾಡಿ, ಜೆಡಿಎಸ್ ಬಗ್ಗೆ ಟೀಕೆ ಮಾಡುವುದನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.
ಮುಂದೊಂದು ದಿನ ಸರ್ಕಾರ ರಚನೆ ಮಾಡುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲ ಬೇಕಾಗುತ್ತದೆ. ಟೀಕೆ ಇಲ್ಲವೆ ವೈಯಕ್ತಿಕ ನಿಂದನೆ ನಡೆಸಿದರೆ ರಾಜ್ಯದಲ್ಲಿ ಮತ್ತೆ ಮಧ್ಯಂತರ ಚುನಾವಣೆ ನಡೆಯುವುದು ಅನಿವಾರ್ಯವಾಗುತ್ತದೆ. ಹೀಗಾಗಿ ಜೆಡಿಎಸ್ ಬಗ್ಗೆ ಸ್ವಲ್ಪ ದಿನದ ಮಟ್ಟಿಗೆ ಮೃದುಧೋರಣೆ ಹೊಂದಬೇಕು ಎಂದು ಸೂಚಿಸಿರುವುದಾಗಿ ತಿಳಿದುಬಂದಿದೆ.

ಯಾವುದೇ ಕಾರ್ಯಕ್ಕೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಮುಂದುವರಿಯುವುದಿಲ್ಲ. ಲೋಕಸಭೆ ಚುನಾವಣೆ ಬರುವವರೆಗೂ ಮುಂದುವರಿಸಿಕೊಂಡು ಹೋಗಬಹುದು ಎಂಬ ನಿರೀಕ್ಷೆ ಇತ್ತು. ಈಗಿನ ಬೆಳವಣಿಗೆಗಳನ್ನು ನೋಡಿದರೆ ಡಿಸೆಂಬರ್ ವೇಳೆಗೆ ಸರ್ಕಾರ ಪತನವಾಗಬಹುದು. ಜೆಡಿಎಸ್‍ನಿಂದ ಬಾಹ್ಯ ಬೆಂಬಲ ಪಡೆದು ಸರ್ಕಾರ ರಚಿಸಲು ಪ್ರಯತ್ನಿಸೋಣ ಎಂದು ಅಮಿತ್ ಷಾ ಹೇಳಿದ್ದಾಗಿ ಮೂಲಗಳು ಖಚಿತಪಡಿಸಿವೆ.
ಒಲ್ಲದ ಪರಿಸ್ಥಿತಿಯಲ್ಲಿ ಕುಮಾರಸ್ವಾಮಿಯವರು ಸರ್ಕಾರ ರಚಿಸಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡುತ್ತಿರುವ ಹೇಳಿಕೆಗಳು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಸುತಾರಾಂ ಇಷ್ಟವಿಲ್ಲ. ಯಾವುದೋ ಒಂದು ಕಾರಣಕ್ಕಾಗಿ ಸರ್ಕಾರ ನಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಇಂತಹ ವೇಳೆ ಜೆಡಿಎಸ್ ಜೊತೆ ನೀವು ಆಪ್ತವಾಗಿರಬೇಕೆ ವಿನಃ ಟೀಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಈಗಿನ ಪರಿಸ್ಥಿತಿಯನ್ನು ಗಮನಿಸಿದರೆ ಡಿಸೆಂಬರ್ ಒಳಗೆ ಸರ್ಕಾರ ಮುಂದುವರಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಕಾಂಗ್ರೆಸ್‍ನಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಡಿ.ಕೆ.ಶಿವಕುಮಾರ್ ಹೊರತುಪಡಿಸಿದರೆ ಉಳಿದವರಿಗೆ ಸರ್ಕಾರ ಮುಂದುವರಿಯುವುದು ಇಷ್ಟವಿಲ್ಲ. ಒಂದೊಮ್ಮೆ ಸರ್ಕಾರ ಪತನವಾದರೆ ಬಿಜೆಪಿಯ ಮೇಲೆ ಯಾವುದೇ ರೀತಿಯ ಆರೋಪಗಳು ಬಾರದಂತೆ ಎಚ್ಚರಿಕೆ ಹೆಜ್ಜೆ ಇಡಬೇಕು.
ಸರ್ಕಾರ ಪತನವಾಗಲು ಕಾಂಗ್ರೆಸ್ಸೇ ಕಾರಣ ಎಂಬುದು ಸಾರ್ವಜನಿಕ ವಲಯದಲ್ಲಿ ಬಿಂಬಿತವಾಗಬೇಕು. ನಾವು ಪೂರ್ಣ ಬಹುಮತ ಪಡೆಯದಿದ್ದರೂ ಜನಾದೇಶ ನಮ್ಮ ಪರವಾಗಿತ್ತು.

ಈ ಮೊದಲು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿತ್ತು, ಈಗ ಜೆಡಿಎಸ್‍ಗೂ ಸಹ ಕೈ ಕೊಟ್ಟಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡಬೇಕು. ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷಕ್ಕೆ ಹೆಚ್ಚಿನ ಹಿನ್ನಡೆಯಾಗಲಿದೆ. ಈ ತಂತ್ರವನ್ನು ಅನುಸರಿಸಿದರೆ ಮಾತ್ರ ಬಿಜೆಪಿ ಸರ್ಕಾರ ರಚಿಸಲು ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು ರಾಜ್ಯ ನಾಯಕರ ಮುಂದೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ನಾಯಕರ ಸೂಚನೆ ಹಿನ್ನೆಲೆಯಲ್ಲಿ ಬಿಜೆಪಿ, ಜೆಡಿಎಸ್ ಬಗ್ಗೆ ಕಳೆದೊಂದು ವಾರದಿಂದ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುತ್ತಿಲ್ಲ. ಬದಲಾಗಿ ಕಾಂಗ್ರೆಸ್ ವಿರುದ್ಧವೇ ಯಡಿಯೂರಪ್ಪ ಸೇರಿದಂತೆ ಅನೇಕರು ಬುಸುಗುಡುತ್ತಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ