ಬೆಂಗಳೂರು, ಆ.26- ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕೂವರೆ ವರ್ಷ ಅವರ ಬೆನ್ನಿಗೆ ನಿಂತು ಬೆಂಬಲ ನೀಡಿದ್ದೆ. ಈಗ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ. ಐದು ವರ್ಷ ಅಧಿಕಾರ ಮುಗಿಯುವ ವರೆಗೂ ನಾನು ಯಾರ ಕಾಲನ್ನು ಎಳೆಯುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಸಂವಿಧಾನಾತ್ಮಕವಾಗಿ ರಚನೆಯಾಗಿದೆ. ಬೀಳಿಸಿದ ತಕ್ಷಣ ಒಡೆದು ಹೋಗಲು ಇದು ಮಡಿಕೆಯಲ್ಲ ಆದರೂ ಪ್ರಯತ್ನ ಪಡುತ್ತೇವೆ ಎಂದರೆ ಬಿಜೆಪಿಯ ಸ್ನೇಹಿತರಿಗೆ ಒಳ್ಳೆಯದಾಗಲಿ ಎಂದು ಮಾರ್ಮಿಕವಾಗಿ ಹೇಳಿದರು.
ಬಿಜೆಪಿಯ ಶಾಸಕರ ಸಂಖ್ಯಾ ಬಲ 104 ಅದು 113ಕ್ಕೇರಬೇಕಾದರೆ ಒಂದು ಶಾಸಕರ ರಾಜೀನಾಮೆ ಕೊಡಿಸಬೇಕು. ಮತ್ತೆ ಅವರು ಚುನಾವಣೆಯಲ್ಲಿ ಗೆದ್ದು ಬರಬೇಕು. ಆ ಮೇಲೆ ಅವಿಶ್ವಾಸ ನಿರ್ಣಯ ತಂದು ಸರ್ಕಾರ ಬೀಳಿಸಬೇಕು. ಅದು ಅಷ್ಟು ಸುಲಭ ಅಲ್ಲ. ಈ ಮೊದಲು ಚುನಾವಣೆ ಮುಗಿದ ತಕ್ಷಣವೇ ಬಿಜೆಪಿ ರಾಷ್ಟ್ರೀಯ ನಾಯಕರು ಆತುರಾತುರವಾಗಿ ಸರ್ಕಾರ ರಚಿಸುವ ಪ್ರಯತ್ನ ಮಾಡಿದ್ದರು. ಸರ್ಕಾರಕ್ಕೆ ಸಂಖ್ಯಾಬಲ ಇಲ್ಲದೇ ಇದ್ದರೂ ವಿಶ್ವಾಸ ಮತ ಸಾಬೀತುಪಡಿಸಲು 15ದಿನಗಳ ಕಾಲಾವಕಾಶ ಪಡೆದುಕೊಂಡಿದ್ದರು.
ಆದರೆ, ಸುಪ್ರೀಂಕೋರ್ಟ್ ಅವರಿಗೆ ಸರಿಯಾಗಿ ಬುದ್ದಿ ಹೇಳಿತ್ತು. ಬಿಜೆಪಿ ಸ್ನೇಹಿತರು ತಾಳ್ಮೆಯಿಂದ ಇರಬೇಕು. ಇಷ್ಟು ಆತುರಾತುರವಾಗಿ ಮುಂದುವರೆಯುವುದು ಒಳ್ಳೆಯದಲ್ಲ. ನಂಬರ್ ಗೇಮ್ ಆಟದಲ್ಲಿ ಗೆಲ್ಲುವುದು ಕಷ್ಟ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವುದಾಗಿ ಹೇಳಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಅವರು ಪಕ್ಷದ ಹಿರಿಯ ನಾಯಕರು. ವಿದ್ಯಾವಂತ ಮತ್ತು ಹಿರಿಯ ಮುತ್ಸದ್ಧಿ . ಅವರು ಸರ್ಕಾರವನ್ನು ಗೊಂದಲಕ್ಕೆ ತಳ್ಳುವಂತಹ ಯಾವುದೇ ಕೆಲಸ ಮಾಡುವುದಿಲ್ಲ. ರಾಜಕಾರಣಿ ಎಂದ ಮೇಲೆ ಆಸೆಗಳು ಇರಲೇ ಬೇಕು. ಕಾರ್ಯಕರ್ತರನ್ನು ಹುಮ್ಮಸ್ಸಿನಲ್ಲಿ ಇಡಬೇಕಾದರೆ ಆ ರೀತಿಯ ಹೇಳಿಕೆಗಳನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದರು.
ಸದ್ಯಕ್ಕೆ ನಾನು ಮುಖ್ಯಮಂತ್ರಿಯ ಹುದ್ದೆ ರೇಸಿನಲ್ಲಿಲ್ಲ. ಈಗ ಸಮ್ಮಿಶ್ರ ಸರ್ಕಾರ ನಡೆಯುತ್ತಿದೆ. ಐದು ವರ್ಷ ಅಧಿಕಾರಾವಧಿ ಪೂರ್ಣಗೊಳ್ಳುತ್ತದೆ. ಆವರೆಗೂ ಯಾವುದೇ ತೊಂದರೆಗಳಾಗುವುದಿಲ್ಲ. ಮುಂದೆ ಚುನಾವಣೆ ನಡೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಮುಂದಿನ ಮುಖ್ಯಮಂತ್ರಿ ಯಾರು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಹೈಕಮಾಂಡ್ ಯಾರನ್ನೇ ಸೂಚಿಸಿದರೂ ಅವರನ್ನು ಮುಖ್ಯಮಂತ್ರಿ ಮಾಡಲು ನಾವು ಸಿದ್ದ ಎಂದರು.
ಅಮೆರಿಕದಲ್ಲಿ ನಡೆಯುತ್ತಿರುವ ಅಕ್ಕ ಸಮ್ಮೇಳನಕ್ಕೆ ಕೆಲವು ಸಚಿವರು, ಅಧಿಕಾರಿಗಳು ಹೋಗುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಪ್ರತಿ ವರ್ಷ ಮುಖ್ಯಮಂತ್ರಿ, ಸಚಿವರು ಹೋಗುವುದು ವಾಡಿಕೆ. ಈ ಬಾರಿಯೂ ಮುಖ್ಯಮಂತ್ರಿಯವರು ಹೋಗಬೇಕಿತ್ತು. ಆದರೆ, ಅದು ಸಾಧ್ಯವಾಗುತ್ತಿಲ್ಲ. ನನಗೂ ಆಹ್ವಾನ ಇತ್ತು. ಆದರೆ, ಬೇರೆ ಬೇರೆ ಕಾರಣಗಳಿಂದ ನಾನು ಅಮೆರಿಕಕ್ಕೆ ಹೋಗುತ್ತಿಲ್ಲ ಎಂದು ತಿಳಿಸಿದರು.
ಕೊಡಗಿನಲ್ಲಿ ಮಳೆಯಿಂದಾಗಿರುವ ಅನಾಹುತದಿಂದ ಪುನರ್ನಿರ್ಮಿಸಬೇಕಿದೆ. ಈ ನಿಟ್ಟಿನಲ್ಲಿ ಸಚಿವ ಸಾ.ರಾ.ಮಹೇಶ್, ಸಚಿವ ಸಂಪುಟ ಸಭೆಗೂ ಬರದೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾಸೀತರಾಮನ್ ಅವರು ದೊಡ್ಡವರು. ಅವರು ಬಂದು ಸಾ.ರಾ.ಮಹೇಶ್ ಅವರನ್ನು ನಿಂದಿಸಿ ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬೇಕಿದ್ದರೆ ಇನ್ನೊಂದು ಬಾರಿ ಬಂದು ಇನ್ನಷ್ಟು ಬೈದು ಹೋಗಲಿ. ನಮಗೇನು ಬೇಜಾರಿಲ್ಲ. ನಮ್ಮ ಜನರಿಗೆ ಒಳ್ಳೆಯದಾಗಬೇಕು. ನಮ್ಮ ಮೂಲ ಉದ್ದೇಶ ಅದು ಎಂದು ಹೇಳಿದರು.
ಕೇಂದ್ರ ಸರ್ಕಾರ ಕೊಡಗು ಸಂತ್ರಸ್ತರಿಗೆ ಹಣ ಕೊಡಲೇಬೇಕಿದೆ ಎಂದು ಹೇಳಿದ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನ ಸೇರಿಸಿ ಸುಮಾರು 100 ಕೋಟಿ ರೂ.ಗಳನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ ಹಣ ಸದ್ಬಳಕೆಯಾಗುವಂತೆ ಮಾಡಲು ಮುಖ್ಯಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ ಎಂದು ತಿಳಿಸಿದರು.