ಸಂತ್ರಸ್ತರ ಪರ ಶತಕೋಟಿ ಭಾರತೀಯರು: ಮನ್ ಕೀ ಬಾತ್‍ನಲ್ಲಿ ಮೋದಿ

ನವದೆಹಲಿ: ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದ 47ನೇ ಸರಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾತನಾಡಿದ್ದು, ಅಟಲ್ ಬಿಹಾರಿ ವಾಜಪೇಯಿ, ಕೇರಳ ಪ್ರವಾಹ, ತ್ರಿವಳಿ ತಲಾಖ್, ಏಷ್ಯನ್ ಗೇಮ್ಸ್ ಸಾಧನೆ ಸೇರಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

ಭಾನುವಾರ ರಕ್ಷಾಬಂಧನವೂ ಆಗಿರುವುದರಿಂದ ಮೋದಿ ಅವರು ದೇಶದ ಜನರಿಗೆ ರಕ್ಷಾಬಂಧನದ ಶುಭ ಕೋರುವ ಜತೆಗೆ ಮಹಿಳೆಯರಿಗೆ ಸಾಮಾಜಿಕ ಭದ್ರತೆ ಹಾಗೂ ನ್ಯಾಯ ಒದಗಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಅದರಲ್ಲೂ ತ್ರಿವಳಿ ತಲಾಖ್ ವಿರುದ್ಧ ಕಾಯಿದೆ ರೂಪಿಸುವ ಮೂಲಕ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಒದಗಿಸುವ ಭರವಸೆ ನೀಡಿದ್ದಾರೆ. ಮನ್ ಕೀ ಬಾತ್‍ನಲ್ಲಿ ಮೋದಿ ಪ್ರಸ್ತಾಪಿಸಿರುವ ಪ್ರಮುಖ ವಿಷಯ ಇಲ್ಲಿವೆ.

ಕೇರಳದ ಜತೆ ದೇಶದ ಜನತೆ:
ದೇಶದ ಬಹುತೇಕ ಭಾಗಗಳಲ್ಲಿ ಈ ಬಾರಿ ಮುಂಗಾರು ಮಳೆ ಉತ್ತಮವಾಗಿದೆ. ಹಾಗಾಗಿ ಭೂತಾಯಿ ಹಸಿರಾಗಿದ್ದಾಳೆ, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ ಕೇರಳ ಸೇರಿ ಹಲವೆಡೆ ಉಂಟಾದ ಪ್ರವಾಹದಿಂದ ಜನ ನಲುಗಿಹೋಗಿದ್ದಾರೆ, ಜೀವ ಕಳೆದುಕೊಂಡಿದ್ದಾರೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳದಲ್ಲಂತೂ ಜನರ ಬದುಕು ಅಕ್ಷರಶಃ ದುಸ್ತರವಾಗಿದೆ. ಹಾಗಂತ ಯಾರೂ ಭೀತಿಗೊಳಗಾಗಬೇಕಿಲ್ಲ. ದೇಶದ 125 ಕೋಟಿ ಜನ ಕೇರಳದ ಜನರ ಜತೆ ಇದ್ದಾರೆ. ಹೆಗಲಿಗೆ ಹೆಗಲು ಕೊಟ್ಟು ನಿಮ್ಮನ್ನು ರಕ್ಷಿಸುತ್ತೇವೆ.

ಸಂಸತ್ ಅದಿವೇಶನ ಯಶಸ್ವಿ:
ಈ ಬಾರಿಯ ಮುಂಗಾರು ಅದಿವೇಶನದಲ್ಲಿ ಹಲವು ವಿಷಯ ಚರ್ಚೆಯಾಗಿದ್ದು, ಮಸೂದೆಗೆ ಅಂಗೀಕಾರವೂ ಸಿಗುವ ಮೂಲಕ ಕಲಾಪ ಯಶಸ್ವಿಯಾಗಿದೆ. ಸಾಮಾಜಿಕ ನ್ಯಾಯ ಹಾಗೂ ಯುವಕರ ಕಲ್ಯಾಣಕ್ಕೆ ಕಲಾಪ ಮೀಸಲಾಗಿತ್ತು. ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಹಕ್ಕು ಕಾಪಾಡಲು ನಾವು ಬದ್ಧ.

ರಕ್ಷಾಬಂಧನ ಸಹೋದರತ್ವದ ಸಂಕೇತ:
ದೇಶಾದ್ಯಂತ ರಕ್ಷಾಬಂಧನ ಆಚರಿಸುತ್ತಿರುವ ಎಲ್ಲರಿಗೂ ಹಬ್ಬದ ಶುಭಾಶಯಗಳು. ರಕ್ಷಾಬಂಧನ ಸಹೋದರತ್ವ ಹಾಗೂ ಸಾಮರಸ್ಯದ ಸಂಕೇತವಾಗಿದೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿ, ಮಮಕಾರದ ದ್ಯೋತಕವಾಗಿದೆ. ಮುಂದಿನ ದಿನಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಇದೆ, ದೀಪಾವಳಿ ಬರುತ್ತಿದೆ. ಎಲ್ಲರೂ ಒಂದಾಗಿ ಹಬ್ಬ ಆಚರಿಸೋಣ.

ಚಿನ್ನದ ಜತೆ ಗೆದ್ದಿರಿ ನಮ್ಮ ಮನ:
ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‍ನಲ್ಲಿ ಭಾರತೀಯ ಆಟಗಾರರು ಚಿನ್ನ ಸೇರಿ ಹಲವು ಪದಕ ಗೆದ್ದಿರುವುದು ನಮಗೆ ಹೆಮ್ಮೆ ತಂದಿದೆ. ನಮ್ಮ ಆಟಗಾರರು ಉತ್ತಮ ಪ್ರದರ್ಶನ ನೀಡಿ ಚಿನ್ನದ ಜತೆ ನಮ್ಮ ಮನ ಗೆದ್ದಿದ್ದಾರೆ. ಇನ್ನೂ ಸ್ಪರ್ಧೆಯಲ್ಲಿ ಭಾಗವಹಿಸುವ ಆಟಗಾರರೂ ಚಿನ್ನ ಗೆಲ್ಲಲಿ ಎಂದು ಆಶಿಸುವೆ.

ಅಟಲ್‍ಜೀ ಅವರ ನೆನೆದ ಮೋದಿ:
ಅಟಲ್ ಬಿಹಾರಿ ವಾಜಪೇಯಿ ಅವರು ನಿಜವಾದ ದೇಶಭಕ್ತ. ಅವರು ಸಂಸತ್ತಿನ ಚರ್ಚೆಗಳಿಗೆ ಮೆರುಗು ತಂದರು, ಭಾರತದ ರಾಜಕೀಯ ವ್ಯವಸ್ಥೆಗೆ ಮೇಲ್ಪಂಕ್ತಿ ಹಾಕಿದರು, ಗದ್ದಲದಲ್ಲೇ ಕಳೆದುಹೋಗುತ್ತಿದ್ದ ಸಂಸತ್ ಚರ್ಚೆಗಳಿಗೆ ಹೊಸ ಸ್ವರೂಪ ನೀಡಿದರು ಎಂದು ಮೋದಿ ಹೇಳಿದ್ದಾರೆ. ಅಷ್ಟೇ ಅಲ್ಲ, ಬ್ರಿಟಿಷರ ಕಲ್ಪನೆಯಂತೆ ದೇಶದ ಬಜೆಟ್ ಮಂಡನೆಯಾಗುತ್ತಿತ್ತು. ಅಂದರೆ ಲಂಡನ್ ಸಮಯಕ್ಕೆ ಅನುಗುಣವಾಗುವಂತೆ ಸಂಜೆ 5 ಗಂಟೆಗೆ ಮುಂಗಡಪತ್ರ ಮಂಡನೆಯಾಗುತ್ತಿತ್ತು. ಆದರೆ ಭಾರತೀಯ ಸಂಪ್ರದಾಯದಂತೆ ಆಯ-ವ್ಯಯ ಪಟ್ಟಿ ಮಂಡಿಸುವ ದಿಸೆಯಲ್ಲಿ ವಾಜಪೇಯಿ ಅವರು ಸಂಜೆ 5 ಗಂಟೆ ಬದಲಿಗೆ 2001ರಲ್ಲಿ ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಿದರು.

ಜನರ ರಕ್ಷಿಸಿದ ಯೋಧರಿಗೆ ನಮನ:
ಕೇರಳದಲ್ಲಿ ಉಂಟಾದ ನೆರೆ ವೇಳೆ ಜನರನ್ನು ರಕ್ಷಿಸುವಲ್ಲಿ ಭಾರತೀಯ ಸೈನ್ಯದ ವಾಯುಪಡೆ, ನೌಕಾಪಡೆ, ಭೂಸೇನೆ ವಹಿಸಿದ ಶ್ರಮ ಮಹತ್ತರವಾದುದು. ಅವರ ಶ್ರಮದಿಂದಲೇ ಸಾವಿರಾರು ಜನರ ರಕ್ಷಣೆಯಾಯಿತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಸಹ ರಕ್ಷಣೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಅವರ ಸೇವೆಗೆ ನಮ್ಮ ನಮನವಿದೆ ಎಂದು ಮೋದಿ ಹೇಳಿದರು.

ಬೆಂಗಳೂರಿನ ಬಾಲಕಿಗೆ ಮೋದಿ ಶ್ಲಾಘನೆ:
ಬೆಂಗಳೂರಿನ ಗಿರಿನಗರದ ವಿದ್ಯಾರ್ಥಿನಿ ಚಿನ್ಮಯಿ ಸಂಸ್ಕøತದಲ್ಲಿ ಕೇಳಿದ ಪ್ರಶ್ನೆಗೆ ಮೋದಿ ಅವರು ಶ್ಲಾಘಿಸಿದ್ದಾರೆ. ಸಂಸ್ಕøತ ಸಪ್ತಾಹ ನಡೆಯುತ್ತಿರುವ ಈ ಸಂದರ್ಭದಲ್ಲಿ ನಾವು ರಕ್ಷಾಬಂಧನ, ಶ್ರಾವಣ ಪೂರ್ಣಿಮೆ ಜತೆಗೆ ಸಂಸ್ಕøತ ದಿನವನ್ನೂ ಹಬ್ಬದ ರೀತಿ ಆಚರಿಸೋಣ. ದೇಶದ ಪ್ರತಿಯೊಂದು ಭಾಷೆಗೂ ಮಹತ್ವವಿದೆ. ಅದರಲ್ಲೂ ಸಂಸ್ಕøತ ಸೇರಿ ಹಲವು ಭಾಷೆಗಳು ಜ್ಞಾನ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿವೆ ಎಂದು ಮೋದಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ