ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿಗಳನ್ನು ದೇಶದ 100 ಪುಣ್ಯ ನದಿಗಳಲ್ಲಿ ವಿರ್ಸಜನೆ ಮಾಡಲು ನಿರ್ಧರಿಸುವ ಕಾರ್ಯಕ್ರಮದ ಭಾಗವಾಗಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಚಿತಾಭಸ್ಮ ಸ್ವೀಕರಿಸಲಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಿದ ಬಿಎಸ್ವೈ, ಅಟಲ್ ಅವರ ಅಸ್ಥಿಯನ್ನು ಕರ್ನಾಟಕಕ್ಕೆ ತೆಗೆದುಕೊಂಡು ಹೋಗಲು ಇಂದು ದೆಹಲಿಗೆ ಆಗಮಿಸಿದ್ದೇನೆ. ಇಲ್ಲಿನ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮ ಸ್ವೀಕರಿಸಲಿದ್ದೇನೆ ಎಂದು ತಿಳಿಸಿದರು.
ಅಟಲ್ ಅವರ ಚಿತಾಭಸ್ಮ ತೆಗೆದುಕೊಂಡು ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತೇನೆ. ಬಳಿಕ ಬೆಂಗಳೂರು ವಿಮಾನ ನಿಲ್ದಾಣದಿಂದ ಮೆರವಣಿಗೆ ಮೂಲಕ ಬಿಜೆಪಿ ಕಚೇರಿಗೆ ಕೊಂಡೊಯ್ಯಲಾಗುತ್ತದೆ. ನಂತರ ಜಗನ್ನಾಥ ಭವನಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಸುಮಾರು 1 ಸಾವಿರ ಕಾರ್ಯಕರ್ತರು ಪುಷ್ಪಾರ್ಚನೆ ಮಾಡಲಿದ್ದಾರೆ. ಗುರುವಾರ ಬೆಳಗ್ಗೆ ಶ್ರೀರಂಗಪಟ್ಟಣ ಬಳಿಯ ತ್ರಿವೇಣಿ ಸಂಗಮದಲ್ಲಿ ಮೊದಲು ಅಟಲ್ ಅವರ ಚಿತಾಭಸ್ಮವನ್ನು ನದಿಗೆ ಬಿಡಲಾಗುವುದು ಅಂದ್ರು.
ರಾಜ್ಯದ ಪ್ರಮುಖ 7 ನದಿಗಳಿಗೆ ವಾಜಪೇಯಿ ಚಿತಾಭಸ್ಮ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಎಲ್ಲಾ ವ್ಯವಸ್ಥೆಗಳು ಈಗಾಗಲೇ ಪೂರ್ಣಗೊಂಡಿದೆ ಎಂದು ತಿಳಿಸಿದರು.
ಇದೇ ವೇಳೆ ಕೊಡಗು ಪ್ರವಾಹ ಸ್ಥಿತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಪ್ರವಾಹದ ಕುರಿತು ಪ್ರಧಾನಿ ಮೋದಿ ಅವರ ಬಳಿ ಮಾತುಕತೆ ನಡೆಸಿ ಹೆಚ್ಚಿನ ಪರಿಹಾರ ನಿಧಿ ಬಿಡುಗಡೆ ಕುರಿತು ಚರ್ಚೆ ನಡೆಸಲಾಗಿದೆ. ಅಲ್ಲದೇ ಪ್ರಧಾನಿಗಳೇ ನೇರ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯ ಬಗ್ಗೆ ಅರಿತುಕೊಳ್ಳಲು ಸಹ ಮನವಿ ಮಾಡಲಾಗಿದೆ. ಹೆಚ್ಚಿನ ಪರಿಹಾರ ನಿಧಿ ಪಡೆಯಲು ಮತ್ತೊಮ್ಮೆ ಚರ್ಚೆ ನಡೆಸಲು ಅವಕಾಶ ಕೇಳಿದ್ದಾಗಿ ತಿಳಿಸಿದರು.