ಬೆಂಗಳೂರು, ಆ.21- ಕಂಡೂ ಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿರುವ ಕೊಡಗಿನ ಪರಿಸ್ಥಿತಿ ನಿಭಾಯಿಸಲು ಸರ್ಕಾರ, ಸೇನೆ, ಸಾರ್ವಜನಿಕರು ಹಾಗೂ ಸ್ಥಳೀಯರು ಹೆಣಗಾಡುತ್ತಿದ್ದಾರೆ.
ಬಿಟ್ಟುಬಿಡದೆ ಮಳೆ ಸುರಿಯುತ್ತಿದೆ. ಕಾರ್ಯಾಚರಣೆಗೆ ಅಡ್ಡಿಯಾಗುತ್ತಲೇ ಇದೆ. ಈ ನಡುವೆಯೂ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇನಾಪಡೆಗಳವರು ಅಪಾಯದಲ್ಲಿರುವವರನ್ನು ರಕ್ಷಿಸುತ್ತಿದ್ದಾರೆ.
ಅತ್ತ ಮಲೆನಾಡು ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿವೆ. ಇಂದು ಕೊಪ್ಪದ ಬಳಿ ಗುಡ್ಡ ಕುಸಿದು ಸುಮಾರು 10 ಎಕರೆ ಕಾಫಿ ತೋಟ ಕಣ್ಣೆದುರೇ ನಾಶವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಭೂತನಕಾಡಿನ ಸಮೀಪದಲ್ಲಿ ಕಾಫಿ ತೋಟದಲ್ಲಿ ಸುಮಾರು 20 ಅಡಿ ಆಳಕ್ಕೆ ಗುಡ್ಡ ಕುಸಿದು ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಗುಡ್ಡ ಕುಸಿತದಿಂದ ಸುತ್ತಮುತ್ತಲ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರೆ.
ಎರಡು ವಾರಗಳಿಂದ ನಿರಂತರವಾಗಿ ಇಲ್ಲಿ ಮಳೆ ಸುರಿಯುತ್ತಿರುವುದರಿಂದ ಚಿಕ್ಕಮಗಳೂರಿನ ವಿವಿಧಡೆ ಗುಡ್ಡ ಕುಸಿತ ಉಂಟಾಗಿತ್ತು. ಇಂದೂ ಕೂಡ ಗುಡ್ಡ ಕುಸಿತ ಉಂಟಾಗಿರುವುದರಿಂದ ಜನರಲ್ಲಿ ಭೀತಿ ಎದುರಾಗಿದೆ.
ಭೂಕಂಪ ಭೀತಿ; ಗ್ರಾಮ ತೊರೆದ ಜನ:
ಭೂಕಂಪವಾಗಿದೆ ಎಂದು ಭಯಭೀತಗೊಂಡಿರುವ ಹಾಸನ ಜಿಲ್ಲೆ ಸಕಲೇಶಪುರದ ಹಿಜ್ಜನಹಳ್ಳಿ, ಮಾಗೇರಿ ಸೇರಿದಂತೆ ಹಲವು ಗ್ರಾಮಗಳವರು ಊರು ಖಾಲಿ ಮಾಡಿದ್ದಾರೆ. ಈ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಮನೆಗಳು, ರಸ್ತೆ ಕೂಡ ಬಿರುಕು ಬಿಟ್ಟಿವೆ. ಅಧಿಕಾರಿಗಳಿಗೆ ವಿಷಯ ತಿಳಿಸಿದರೂ ಈವರೆಗೆ ಯಾರೂ ಬಂದು ನೋಡಿಲ್ಲ. ಕೊಡಗಿನಲ್ಲಿ ಗುಡ್ಡಕುಸಿತದಿಂದ ಆಗಿರುವ ಅನಾಹುತಗಳಿಂದ ಈ ಭಾಗದ ಜನ ಭಯಭೀತರಾಗಿ ಊರು ಖಾಲಿ ಮಾಡಿದ್ದಾರೆ.
ಬಿಸಲೆಘಾಟ್ ರಸ್ತೆ ಕುಸಿತ:
ಮಳೆಯ ಹೊಡೆತಕ್ಕೆ ಸಕಲೇಶಪುರದ ಬಿಸಲೆಘಾಟ್ ರಸ್ತೆ ಬಿರುಕುಬಿಟ್ಟಿದೆ. ಭೂಕಂಪದ ರೀತಿ ರಸ್ತೆ ಇಬ್ಬಾಗವಾಗಿರುವುದಕ್ಕೆ ಜನ ಭಯಭೀತವಾಗಿದ್ದಾರೆ. ಹೊಸದಾಗಿ ಕಾಂಕ್ರಿಟ್ ರಸ್ತೆ ನಿರ್ಮಿಸಿದ್ದರೂ ಒಂದು ಅಡಿಯಷ್ಟು ಅಗಲ ಬಿರುಕು ಬಿಟ್ಟಿರುವುದು ಆತಂಕ್ಕೀಡು ಮಾಡಿದೆ. ಸಕಲೇಶಪುರ, ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗೆ ಸಂಪರ್ಕ ಕೊಂಡಿಯಾಗಿದ್ದ ಬಿಸಲೆಘಾಟ್ ರಸ್ತೆಯಲ್ಲಿ ಸದ್ಯ ಸಂಚಾರ ಸ್ಥಗಿತಗೊಳಿಸಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಭೇಟಿ:
ಹಾಸನ ಜಿಲ್ಲೆಯಲ್ಲಿ ಸಂಭವಿಸಿರುವ ಭೂಕಂಪದ ಸ್ಥಳ ವೀಕ್ಷಿಸಲು ಮಾಜಿ ಪ್ರಧಾನಿ ದೇವೇಗೌಡರು ತುರ್ತಾಗಿ ಅಲ್ಲಿಗೆ ತೆರಳಲಿದ್ದಾರೆ.
ಬೆಟ್ಟಕುಸಿದು ಕೊಚ್ಚಿ ಹೊಯ್ತು 40ಎಕರೆ ಅರಣ್ಯ ಪ್ರದೇಶ:
ದಕ್ಷಿಣ ಕನ್ನಡ ಜಿಲ್ಲೆಯ ಸೂಳ್ಯ ತಾಲ್ಲೂಕಿನ ಕಲ್ಮಕಾರಿನ ಬಳಿ ಇರುವ ಕಡಮಕಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಬೃಹತ್ ಬೆಟ್ಟ ಕುಸಿದು ಎಸ್ಟೇಟ್ ಒಳಗಿರುವ ಹೊಳೆಯ ಸೇತುವೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಕೊಡಗಿನ ಗಡಿ ಭಾಗದ ಜೋಡುಪಾಲ ಮಾದರಿಯಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಭಾರಿ ಸದ್ದು ಕೇಳಿ ಬಂದಿದ್ದು, ಇದರಿಂದ ಎಸ್ಟೇಟ್ ಕಾರ್ಮಿಕರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಭಯಭೀತರಾಗಿದ್ದಾರೆ.
ಇಲ್ಲಿದ್ದ 40ಕ್ಕೂ ಹೆಚ್ಚು ತಮಿಳು ಕಾರ್ಮಿಕರು ಸ್ಥಳಬಿಟ್ಟು ಓಡಿಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಈ ಸ್ಫೋಟದಿಂದಾಗಿ ಸುಮಾರು 40 ಎಕರೆಯಷ್ಟು ಅರಣ್ಯ ಪ್ರದೇಶದ ಮರಗಳ ಬುಡ ಸಮೇತ ಕೊಚ್ಚಿ ಹೋಗಿದೆ.
ಕುಗ್ರಾಮವಾಗಿರುವ ಕಾರಣಕ್ಕೆ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ತೆರಳಿರಲಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಎಚ್ಚೆತ್ತುಕೊಂಡ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಕೂಜುಮಲೆ ಅರಣ್ಯ ಪ್ರದೇಶದಲ್ಲಿ ಭೂಮಿ ಬಿರುಕುಬಿಟ್ಟಿದ್ದು, ಆಸುಪಾಸಿನ ನಿವಾಸಿಗಳನ್ನು ಸ್ಥಳಾಂತರ ಮಾಡಿದ್ದಾರೆ.