ಗೃಹ ಪ್ರವೇಶಕ್ಕೆಂದು ಇಟ್ಟಿದ್ದ ಹಣವನ್ನು ಕೊಡಗು ಜಿಲ್ಲೆ ಸಂತ್ರಸ್ತರಿಗೆ ನೀಡಿದ ಉದ್ಯಮಿ

 

ಬೆಂಗಳೂರು, ಆ.21- ಮನೆ ಗೃಹ ಪ್ರವೇಶಕ್ಕೆಂದು ಇಟ್ಟಿದ್ದ ಹಣವನ್ನು ಕೊಡಗು ಜಿಲ್ಲೆ ಸಂತ್ರಸ್ತರಿಗೆ ನೀಡಿ ಉದ್ಯಮಿಯೊಬ್ಬರು ಇತರರಿಗೆ ಮಾದರಿಯಾಗಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉದ್ಯಮಿ ಆನಂದ್, ನಾನು ವೃತ್ತಿಯಲ್ಲಿ ವ್ಯಾಪಾರಿಯಾಗಿದ್ದು, ಸಾಕಷ್ಟು ಕಷ್ಟಪಟ್ಟು ಬದುಕಿನಲ್ಲಿ ಮೇಲೆ ಬಂದಿದ್ದೇನೆ. ಹಾಗಾಗಿ ಬೇರೆಯವರ ಕಷ್ಟದ ಅರಿವು ನಮಗೆ ಇದೆ. ಕೊಡಗು ಜಿಲ್ಲೆಯಲ್ಲಿ ಮಹಾ ಮಳೆಯಿಂದಾಗಿ ಅಲ್ಲಿನ ಜನರು ಮನೆ, ಆಸ್ತಿಯನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಇದರಿಂದ ನಾನು ಕೂಡ ನೊಂದಿದ್ದೇನೆ ಎಂದು ಹೇಳಿದರು.
ಹೊಸ ಮನೆ ಕಟ್ಟಿಸಿದ್ದೇನೆ. ಇದೇ 24ರಂದು ವರಮಹಾಲಕ್ಷ್ಮಿ ಹಬ್ಬದ ದಿನ ಗೃಹ ಪ್ರವೇಶ ಮಾಡೋಣ ಎಂದುಕೊಂಡಿದ್ದೆ. ಆದರೆ, ಕೊಡಗಿನಲ್ಲಿ ಆಗಿರುವ ಅನಾಹುತದಿಂದ ಗೃಹ ಪ್ರವೇಶ ಮಾಡದೆ ಅಂದು ಮನೆಯಲ್ಲಿ ಸಣ್ಣದೊಂದು ಪೂಜೆ ಮಾಡಿ ಮನೆ ಪ್ರವೇಶಿಸುತ್ತೇವೆ.
ಗೃಹ ಪ್ರವೇಶಕ್ಕೆಂದು ಇಟ್ಟಿದ್ದ 1 ಲಕ್ಷ ಹಣವನ್ನು ನಾನು ನಿನ್ನೆ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗೃಹ ಕಚೇರಿ ಕೃಷ್ಣಾಗೆ ತೆರಳಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿರುವುದಾಗಿ ತಿಳಿಸಿದರು.
ಕೊಡಗು ಜಿಲ್ಲೆಯ ಜನರು ಮನೆ-ಮಠ ಕಳೆದುಕೊಂಡು ದುಃಖದಲ್ಲಿರುವಾಗ ನಾವು ಗೃಹ ಪ್ರವೇಶ ಮಾಡಿ ಸಂಭ್ರಮ ಪಡುವುದು ಸರಿಯಲ್ಲ ಅನ್ನಿಸಿತು. ಅವರೂ ನಮ್ಮವರೇ. ಅಲ್ಲಿನ ಜನರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಯರಾಮ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ