ಸಮರೋಪಾದಿಯಲ್ಲಿ ಪರಿಹಾರ ಸಾಮಗ್ರಿಗಳ ವಿತರಣೆ

 

ಬೆಂಗಳೂರು, ಆ.21- ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಸಂತ್ರಸ್ತರಾದ ಜನರಿಗೆ ಪರಿಹಾರ ಸಾಮಗ್ರಿಗಳನ್ನು ಸಮರೋಪಾದಿಯಲ್ಲಿ ವಿತರಿಸಲಾಗುತ್ತಿದೆ.
ರಾಜ್ಯದ ವಿವಿಧೆಡೆಗಳಿಂದ ದೊಡ್ಡ ದೊಡ್ಡ ಟ್ರಕ್‍ಗಳಿಂದ ಬರುತ್ತಿರುವ ಪರಿಹಾರ ಸಾಮಗ್ರಿಗಳನ್ನು ಸಣ್ಣ ಟ್ರಕ್‍ಗಳಿಗೆ ಲೋಡ್ ಮಾಡಿಕೊಂಡು ಅಗತ್ಯವಿರುವ ಕಡೆ ಕೊಂಡೊಯ್ದು ವಿತರಿಸಲಾಗುತ್ತಿದೆ.
ನಿರಾಶ್ರಿತ ಶಿಬಿರಗಳಿಗಿಂತ ಹೆಚ್ಚಾಗಿ ಸಂತ್ರಸ್ತರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದು, ಅಲ್ಲಿಗೆ ಸ್ವಯಂ ಸೇವಕರು, ಸಂಘಟನೆಗಳವರು, ಸ್ಥಳೀಯರು ಪರಿಹಾರ ಸಾಮಗ್ರಿಗಳನ್ನು ತಲುಪಿಸಲು ಮುಂದಾಗಿದ್ದಾರೆ.
ನಾಲ್ಕು ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತ ಶಿಬಿರದಲ್ಲಿದ್ದರೆ, ಅದಕ್ಕಿಂತ ಹೆಚ್ಚಿನವರು ಸಂಬಂಧಿಕರು, ಸ್ನೇಹಿತರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರಿಗೂ ಕೂಡ ಅಗತ್ಯ ಸಾಮಗ್ರಿಗಳನ್ನು ತಪಿಸುವ ಕೆಲಸವನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾಡುತ್ತಿದ್ದಾರೆ.
ಕೊಡಗಿಗೆ ಮಿಡಿದ ಇಡೀ ರಾಜ್ಯ:
ಕೊಡಗಿನ ಸಂತ್ರಸ್ತರಿಗೆ ಇಡೀ ರಾಜ್ಯವೇ ಸ್ಪಂದಿಸಿದೆ. ದೂರದ ಬೆಳಗಾಂನಿಂದ ಕೋಲಾರದವರೆಗೆ, ಬೀದರ್‍ನಿಂದ ಚಾಮರಾಜನಗರದವರೆಗೆ ಎಲ್ಲರೂ ತಮ್ಮ ನೆರವಿನ ಹಸ್ತ ಚಾಚಿದ್ದಾರೆ.
ಜನಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳು, ಸಾಫ್ಟ್‍ವೇರ್ ಎಂಜನಿಯರ್‍ಗಳು, ಐಟಿ-ಬಿಟಿ ಕಂಪೆನಿಗಳು, ಗಾರ್ಮೆಂಟ್ಸ್‍ಗಳು ಸೇರಿದಂತೆ ಎಲ್ಲರ ಮನ ಮಿಡಿದಿದೆ. ಪರಿಹಾರ ಸಾಮಗ್ರಿಗಳು, ಆರ್ಥಿಕ ನೆರವು ಸೇರಿದಂತೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.
ಮಠಾಧೀಶರು, ಕನ್ನಡಪರ ಸಂಘಟನೆಗಳು, ಮಹಿಳಾ ಸಂಘನೆಗಳು, ಶಾಲಾ-ಕಾಲೇಜುಗಳು ಎಲ್ಲರೂ ನೆರವು ನೀಡಿದ್ದಾರೆ.

ಮುಂದುವರೆದ ಕಾರ್ಯಾಚರಣೆ:
ನಿರಂತರ ಮಳೆ ಹಾಗೂ ಗುಡ್ಡ ಕುಸಿತದಿಂದ ಕಣ್ಮರೆಯಾಗಿರುವ ಜನರ ಹುಡುಕಾಟ ಮುಂದುವರೆದಿದೆ. ಸೇನೆ, ಎನ್‍ಡಿಆರ್‍ಎಫ್, ಡ್ರೋಗ್ ರೆಜಿಮೆಂಟ್ ಪಡೆ, ಅಗ್ನಿಶಾಮಕದಳ, ಸ್ಥಳೀಯ ಪೆÇಲೀಸರು, ಗರುಡಪಡೆ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಮುಕ್ಕೋಡ್ಲು, ಹಾವಂಡಿ ಗ್ರಾಮಗಳಿಂದ ಒಂದೂವರೆ ವರ್ಷದ ಮಗು, ವೃದ್ಧೆಯೊಬ್ಬರು ಸೇರಿದಂತೆ 10 ಮಂದಿಯನ್ನು ರಕ್ಷಿಸಿದ್ದಾರೆ.
ಸರ್ಕಲ್ ಇನ್ಸ್‍ಪೆಕ್ಟರ್ ರಾಜು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಮುಕ್ಕೋಡ್ಲು ಗ್ರಾಮದಲ್ಲಿ ಸಿಲುಕಿಕೊಂಡಿದ್ದ ಇವರನ್ನು ಸುಮಾರು 10 ಕಿ.ಮೀ. ನಡೆದುಕೊಂಡು ಬಂದು ರಕ್ಷಿಸಲಾಗಿದೆ.
ಜನರಲ್ ತಿಮ್ಮಯ್ಯ ಅಡ್ವೆಂಚರ್ ಟೀಮ್, ಗರುಡಾ ಟೀಮ್ ಸಾಥ್ ನೀಡಿ ಅಜ್ಜಿ ಹಾಗೂ ಒಂದೂವರೆ ವರ್ಷದ ಸಮೃದ್ಧ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೋಡುಪಾಲ, ದೇವರಕೊಲ್ಲಿ ಮುಂತಾದಕಡೆ ಕಾಫಿ ತೋಟದಲ್ಲಿ ಕೆಲಸ ಮಾಡಲೆಂದು ಬಂದ ಅಸ್ಸೋಂ ಮೂಲದ ಕಾರ್ಮಿಕರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲು ಎನ್‍ಡಿಆರ್‍ಎಫ್, ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಹತ್ತಾರು ತಂಡಗಳಲ್ಲಿ ವಿವಿಧೆಡೆ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಒಂದೆಡೆ ರಸ್ತೆ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುತ್ತಿದ್ದರೆ, ಮತ್ತೊಂದೆಡೆ ಅಪಾಯದಲ್ಲಿ ಸಿಲುಕಿರುವವರನ್ನು ಹಗ್ಗದ ಮೂಲಕ ಹೊರ ತರುವ ಕೆಲಸವನ್ನು ಮಾಡಲಾಗುತ್ತಿದೆ.

ಬೆಟ್ಟ-ಗುಡ್ಡಗಳನ್ನು ಹತ್ತಿ ಅಪಾಯದಲ್ಲಿ ಸಿಲುಕಿರುವವರನ್ನು ಕರೆತರುವುದು ರಕ್ಷಣಾ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಮಳೆ ಅಬ್ಬರ ಕಡಿಮೆಯಾದರೂ ಗುಡ್ಡ ಕುಸಿತ ಕಡಿಮೆಯಾಗಿಲ್ಲ. ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಲೇ ಇರುವುದು ಆತಂಕ ಸೃಷ್ಟಿಸಿರುವುದಲ್ಲದೆ, ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ. ಇತ್ತ ಸುಮಾರು 41 ನಿರಾಶ್ರಿತ ಕೇಂದ್ರಗಳಲ್ಲಿರುವ ಸಂತ್ರಸ್ತರ ಗೋಳು ಹೇಳತೀರದಾಗಿದೆ.
ಪರಿಹಾರ ಕೇಂದ್ರಗಳಲ್ಲಿ ಸಂತ್ರಸ್ತರು ಪರದಾಡುತ್ತಿದ್ದಾರೆ. ತಮ್ಮ ಮನೆ ಮಠಗಳು ಏನಾಗಿವೆಯೋ ಎಂದು ಪರಿತಪಿಸುತ್ತಿದ್ದಾರೆ. ತಮ್ಮವರು ಏನಾದರೋ, ತಮ್ಮ ಆಸ್ತಿ, ಮನೆ ಏನಾಗಿದೆಯೋ ಏನೋ ಎಂದು ನಿರಾಶ್ರಿತ ಕೇಂದ್ರದಲ್ಲಿ ಗೋಳಾಡುತ್ತಿದ್ದಾರೆ.
ಇತ್ತ ಸ್ವಯಂ ಸೇವಕರು, ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಸರ್ವಸ್ವವನ್ನೂ ಕಳೆದುಕೊಂಡು ನಿರಾಶ್ರಿತ ಕೇಂದ್ರದಲ್ಲಿ ಆಶ್ರಯ ಪಡೆದಿರುವವರನ್ನು ಸಂತೈಸುವಲ್ಲಿ ಕೆಲವರು ತೊಡಗಿದ್ದಾರೆ.
ಬಿಬಿಎಂಪಿ ಪೌರಕಾರ್ಮಿಕರು ಕಲ್ಯಾಣಮಂಟಪ ಶಾಲಾ ಕಟ್ಟಡ, ಸರ್ಕಾರಿ ಕಚೇರಿಗಳು, ಸರ್ಕಾರಿ ಅತಿಥಿ ಗೃಹಗಳು, ಮನೆ ಮುಂತಾದವುಗಳನ್ನು ಶುಚಿಗೊಳಿಸುವಲ್ಲಿ ತೊಡಗಿದ್ದಾರೆ. ಸ್ವಯಂ ಸೇವಕರು ಹಾಗೂ ವಿವಿಧ ಸಂಘಟನೆಗಳವರು ವೃದ್ಧರು, ಮಕ್ಕಳ ಆರೈಕೆಯಲ್ಲಿ ತೊಡಗಿದ್ದಾರೆ.
ನಿರಾಶ್ರಿತ ಶಿಬಿರದಲ್ಲಿರುವ ಪೆÇೀಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲಾಗದೆ ಕಣ್ಣೀರಿಡುತ್ತಿದ್ದಾರೆ. ಜಿಲ್ಲಾಡಳಿತ ಶಾಲೆಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದೆ.
ಪಶ್ಚಿಮ, ನೈರುತ್ಯ, ಕೊಡಗು ಭಾಗ ಸಂಪೂರ್ಣ ನಾಶವಾಗಿದ್ದು, ಇದನ್ನು ಪುನರ್ ನಿರ್ಮಾಣ ಮಾಡಬೇಕಾಗಿದೆ. ಆಸ್ತಿ ನಾಶ, ನಷ್ಟದ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸರ್ಕಾರ ತಾತ್ಕಲಿಕ ಪರಿಹಾರ ಬಿಡುಗಡೆ ಮಾಡಿದೆ. ಕೂಡಲೇ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ