ಮಳೆಯಿಂದ 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 1550ಕಿ.ಮೀ. ರಾಜ್ಯ ಹೆದ್ದಾರಿ ಹಾಳು: ಎಚ್.ಡಿ.ರೇವಣ್ಣ

 

ಬೆಂಗಳೂರು, ಆ.21- ಇತ್ತೀಚೆಗೆ ಬಿದ್ದ ಮಳೆಯಿಂದ 110 ಕಿ.ಮೀ. ರಾಷ್ಟ್ರೀಯ ಹೆದ್ದಾರಿ, 1550ಕಿ.ಮೀ. ರಾಜ್ಯ ಹೆದ್ದಾರಿ ಹಾಳಾಗಿದ್ದು, 487 ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 430 ಕೋಟಿ ರೂ.ನಷ್ಟು ರಾಜ್ಯ ಹೆದ್ದಾರಿಗಳು ಹಾಳಾಗಿವೆ. ದಕ್ಷಿಣ ವಲಯದ ಮಂಗಳೂರು, ಕೊಡಗು, ಹಾಸನ, ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಭಾಗದಲ್ಲಿ 365.95 ಕೋಟಿ ರೂ.ನಷ್ಟು ರಸ್ತೆಗಳು ಹಾಳಾಗಿವೆ. ಉತ್ತರ ವಲಯದ ಉತ್ತರಕನ್ನಡ, ಹಾವೇರಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ ಭಾಗದಲ್ಲಿ 60.83 ಕೋಟಿ ರೂ.ನಷ್ಟು ರಸ್ತೆಗಳು ಹಾನಿಗೀಡಾಗಿದ್ದರೆ, ಗುಲ್ಬರ್ಗ, ಸೇಡಂ, ಬೀದರ್, ರಾಯಚೂರು, ಕೊಪ್ಪಳ ಭಾಗದಲ್ಲಿ 5.10ಕೋಟಿ ರೂ. ನಷ್ಟು ರಸ್ತೆಗಳು ಹಾಳಾಗಿವೆ. 538 ಸೇತುವೆಗಳು ಹಾಳಾಗಿದ್ದು, 78.98 ಕೋಟಿ ರೂ.ನಷ್ಟು ನಷ್ಟವಾಗಿದೆ. 34 ಕಟ್ಟಡಗಳು ಹಾನಿಗೀಡಾಗಿದ್ದು, 5.40ಕೋಟಿ ರೂ.ನಷ್ಟು ನಷ್ಟವಾಗಿದೆ ಎಂದು ಅಂಕಿ-ಅಂಶ ನೀಡಿದರು.
ಸಂಪಾಜೆ ರಸ್ತೆ 32 ಕಿ.ಮೀ. ರಷ್ಟು ಹಾಳಾಗಿದ್ದು, ದುರಸ್ತಿ ಮಾಡಲು ಐದಾರು ತಿಂಗಳು ಬೇಕಾಗುತ್ತದೆ. ವಾಹನಗಳು ಓಡಾಡಲು ಕಷ್ಟವಿದೆ. ರಸ್ತೆ ಗುಣಮಟ್ಟದ ಬಗ್ಗೆ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ನೀಡಿದ ನಂತರವೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಶಿರಾಡಿಘಾಟ್‍ನಲ್ಲಿ ವಾಹನಗಳ ಸಂಚಾರ ಇನ್ನೂ 6-7 ತಿಂಗಳು ಪ್ರಾರಂಭವಾಗದ ಸ್ಥಿತಿಗೆ ತಲುಪಿದೆ. ಶಿರಾಡಿಘಾಟ್ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡುತ್ತದೆ. ಒಂದು ಕಡೆ ಗುಡ್ಡ ಕುಸಿಯುತ್ತದೆ. ಮತ್ತೊಂದು ಕಡೆ ಮಳೆಯಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ತಿಳಿಸಿದರು.
ಕೊಡಗು, ಮಂಗಳೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹೆಚ್ಚಿನ ನಷ್ಟವಾಗಿದೆ. ಅದರಲ್ಲೂ ಕೊಡಗಿನಲ್ಲಿ ಅತಿ ಹೆಚ್ಚು ನಷ್ಟವಾಗಿದೆ. ರಸ್ತೆ ನಿರ್ಮಾಣ ಕಾರ್ಯಕ್ಕೆ 4 ಉಪವಿಭಾಗಗಳ 100 ಎಂಜಿನಿಯರ್‍ಗಳನ್ನು ನೇಮಕ ಮಾಡಲಾಗಿದೆ ಎಂದು ರೇವಣ್ಣ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ