ಕೃಷಿ ಹಾಗೂ ಕೈಗಾರಿಕೆಗಳಿಗೆ ಅನುಕೂಲವಾಗುವ ಲಾಜಿಸ್ಟಿಕ್ ಪಾಲಿಸಿ ಸಿದ್ಧ

 

ಬೆಂಗಳೂರು, ಆ.21- ಕೃಷಿ ಹಾಗೂ ಕೈಗಾರಿಕೆಗಳಿಗೆ ಅನುಕೂಲವಾಗುವಂತಹ ಲಾಜಿಸ್ಟಿಕ್ ಪಾಲಿಸಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಅದಕ್ಕೆ ಅಂತಿಮ ರೂಪ ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿಂದು ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆ ಸೇರಿದಂತೆ ವಿವಿಧ ಸಂಘಟನೆಗಳು ಆಯೋಜಿಸಿದ್ದ ಉದ್ಯಮಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಮಲ್ಟಿಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆಗೆ ಸರ್ಕಾರ ನಿರ್ಧರಿಸಿದ್ದು, ಉದ್ಯಮಿಗಳಿಂದ ಬಂಡವಾಳ ಹೂಡಿಕೆಗೆ ಆಹ್ವಾನಿಸಲಾಗಿದೆ. ಲಾಜಿಸ್ಟಿಕ್ ಪಾಲಿಸಿ ರೂಪಿಸಲು ಅಗತ್ಯವಾದ ಸಲಹೆ, ಸೂಚನೆಗಳನ್ನು ನೀಡುವಂತೆ ಅವರು ಉದ್ಯಮಿಗಳಲ್ಲಿ ಮನವಿ ಮಾಡಿದರು.
ಸಾಗಾಣಿಕಾ ಕ್ಷೇತ್ರ ಅತ್ಯಂತ ಪ್ರಮುಖವಾಗಿದ್ದು, ಸರಕು-ಸಾಗಾಣಿಕೆ ಆಧುನೀಕರಣಗೊಳಿಸುವ ಅಗತ್ಯವಿದೆ. ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರದಲ್ಲಿ ಇದನ್ನು ಇನ್ನಷ್ಟು ಸುಧಾರಣೆ ಮಾಡುವ ಸಲುವಾಗಿ ಸರ್ಕಾರ ಲಾಜಿಸ್ಟಿಕ್ ಪಾಲಿಸಿಯನ್ನು ಸಿದ್ಧಪಡಿಸುತ್ತಿದೆ. ಕೈಗಾರಿಕೆಗಳು ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಸರ್ಕಾರ ರೂಪಿಸುತ್ತಿರುವ ಹೊಸ ನೀತಿಯಲ್ಲಿ ಪರಿಹಾರ ದೊರಕಿಸಲಾಗುವುದು.
ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳ ಬಂಡವಾಳ ಹೂಡಿಕೆ ಮೂಲಕ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದ್ದು, ಇದು ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ನೆರವು ನೀಡಲಿದೆ ಎಂದರು.
ಕೈಗಾರಿಕೆ ಇಲಾಖೆಯ ಪ್ರಧಾನಕಾರ್ಯದರ್ಶಿ ಗೌರವಗುಪ್ತ ಹಾಗೂ ಪ್ರಮುಖ ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ