ಸರ್ಕಾರಕ್ಕೆ ಸವಾಲಾಗಲಿದೆ ಸಂತ್ರಸ್ತರ ಪುನರ್ವಸತಿ

Varta Mitra News

 

ಬೆಂಗಳೂರು, ಆ.21- ಕರಾವಳಿ ರಾಜ್ಯ ಕೇರಳ ಸೇರಿದಂತೆ ದೇಶದ ಕೆಲವೆಡೆ ಶತಮಾನದಲ್ಲೇ ಕಂಡು ಕೇಳರಿಯದ ವಿನಾಶಕಾರಿ ಮಹಾಮಳೆ, ಜಲ ಪ್ರಳಯ ಹಾಗೂ ಭೂ ಕುಸಿತದಿಂದ ಅಪಾರ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಸಂಭವಿಸಿರುವುದು ಸರ್ಕಾರ ಮತ್ತು ಜನತೆಯನ್ನು ತೀವ್ರ ಆತಂಕಕ್ಕೀಡುಮಾಡಿದೆ. ಸಂತ್ರಸ್ತಗೊಂಡ ಲಕ್ಷಾಂತರ ಜನರಿಗೆ ಪುನರ್ವಸತಿ ಕಲ್ಪಿಸಿ ಅವರಿಗೆ ಸದೃಢ ಬದುಕು ಕಟ್ಟಿಕೊಡುವುದು ಈಗ ಸರ್ಕಾರದ ಮುಂದಿರುವ ದೊಡ್ಡ ಸವಾಲು.
ಪ್ರತಿವರ್ಷ ಮುಂಗಾರು ಋತುವಿನಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ವರುಣನ ರುದ್ರತಾಂಡವ ಮಾಮೂಲಿನ ಸಂಗತಿಯಾಗಿದೆ. ಕರಾವಳಿ ರಾಜ್ಯಗಳು ಮತ್ತು ನಗರಗಳಲ್ಲಿ ಮಳೆರಾಯನ ರೌದ್ರಾವತಾರದಿಂದ ದುರಂತಗಳ ಸರಮಾಲೆಗಳೇ ಸಂಭವಿಸುತ್ತಿವೆ.
ಕರಾವಳಿ ಪ್ರದೇಶಗಳ ನಗರಗಳು ಉಕ್ಕುತ್ತಿರುವ ಸಮುದ್ರದಿಂದಾಗಿ ತತ್ತರಿಸುತ್ತಿರುವುದು ಆಗಾಗ ಗೋಚರಿಸುವ ಮಾಮೂಲಿನ ದೃಶ್ಯ. ಇದಕ್ಕೆ ಕಾರಣ ಯಾರು? ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚಾಗುವಿಕೆ, ಕುಂಭದ್ರೋಣ ಮಳೆ ಮತ್ತು ಅದರಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳದೆ ಇರುವುದು ಇದಕ್ಕೆ ಮುಖ್ಯ ಕಾರಣ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ದೇಶದ ವಾಣಿಜ್ಯ ನಗರಿ ಮುಂಬೈ. ಇಲ್ಲಿ ಆಗಾಗ ವರುಣನ ರುದ್ರನರ್ತನದಿಂದ ಜನತೆ ಹೈರಾಣಾಗುತ್ತಾರೆ. ಇಡೀ ಮುಂಬೈ ಭಾಗಶಃ ಜಲಾವೃತಗೊಂಡು ಜನರು ನರಕಯಾತನೆ ಅನುಭವಿಸುತ್ತಾರೆ. ಸಾವು-ನೋವಿನ ಸರಣಿ ಮತ್ತು ಕೋಟ್ಯಂತರ ರೂ.ಗಳ ನಷ್ಟ ಇಲ್ಲಿ ಪ್ರತೀ ವರ್ಷದ ಮಾಮೂಲು ಸಂಗತಿ.
ಕಳೆದ ವರ್ಷ ಮುಂಬೈನಲ್ಲಿ ಭಾರೀ ಮಳೆ ಮತ್ತು ಸಮುದ್ರದ ಅಲೆಗಳ ಭೋರ್ಗರೆತದಿಂದ ಉಂಟಾದ ನೆರೆ ಹಾವಳಿಯಿಂದ 16 ಮಂದಿ ಮೃತಪಟ್ಟರು. 2005ರ ಜುಲೈನಲ್ಲಿ ಒಂದೇ ದಿನದಲ್ಲಿ ಒಂದು ಮೀಟರ್‍ನಷ್ಟು ಮಳೆ ಸುರಿದು ನಗರ ಜಲಾವೃತವಾಯಿತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟರು. 1.7 ಶತಕೋಟಿ ಡಾಲರ್‍ಗಳಷ್ಟು ಅಪಾರ ನಷ್ಟ ಸಂಭವಿಸಿತ್ತು.
ಜುಹೂನಂತಹ ಕಡಲ ಕಿನಾರೆ ಪ್ರದೇಶದಲ್ಲಿ ಸೋಡಾಶಾಪ್ ಹೊಂದಿದ್ದ ಸೈಫ್‍ನಂತೆ ಅನೇಕ ವ್ಯಾಪಾರಿಗಳು ಜಲಪ್ರಳಯದಿಂದ ಕಂಗಾಲಾದರು. ಜೀವನಾಧಾರಕ್ಕಾಗಿ ಪ್ರತಿನಿತ್ಯ ಸಮುದ್ರ ದಂಡೆಯ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ಇವರ ಬದುಕು ಮೂರಾಬಟ್ಟೆಯಾಯಿತು. ಭಾರೀ ಮಳೆ ಮತ್ತು ಅಲೆಗಳ ಹೊಡೆತದಿಂದ ಕೊಚ್ಚಿಹೋದ ತನ್ನ ಅಂಗಡಿಯನ್ನು ದುರಸ್ತಿಗೊಳಿಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾಗಿ ಸೈಫ್ ಹೇಳುತ್ತಾರೆ. ಇದು ಪ್ರತಿವರ್ಷ ಸಂಭವಿಸುವ ದುರಂತ. ಮುಂಗಾರು ಋತುವಿನಲ್ಲಿ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಬದುಕುವಂತಹ ದುಸ್ಥಿತಿ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಸೈಫ್.
ಸೈಫ್‍ನಂತಹ ಅನೇಕ ವ್ಯಾಪಾರಿಗಳ ಬದುಕು ಪ್ರಕೃತಿ ವಿಕೋಪದಿಂದ ಮೂರಾಬಟ್ಟೆಯಾಗಿದೆ. ಅವರ ಜೀವನದ ಪರಿಪಾಟಲು ಹೇಳತೀರದು.
ವಾತಾವರಣ ಬದಲಾವಣೆ ಕಾರಣ:
ಕರಾವಳಿ ರಾಜ್ಯಗಳು ಇಂತಹ ಪರಿಸ್ಥಿತಿಗೆ ಸಿಲುಕಲು ಜಾಗತಿಕ ಉಷ್ಣಾಂಶ ಮತ್ತು ವಾತಾವರಣ ಬದಲಾವಣೆ ಕಾರಣ ಎಂದು ಖ್ಯಾತ ಪರಿಸರ ತಜ್ಞರು ವಿಶ್ಲೇಷಿಸಿದ್ದಾರೆ.
ವಾತಾವರಣ ಬದಲಾವಣೆಯಿಂದ ಸಮುದ್ರಮಟ್ಟದಲ್ಲಿ ಗಮನಾರ್ಹ ಏರಿಕೆಯಾಗುತ್ತಿದೆ. ಇದೇ ವೇಳೆ ಮುಂಗಾರು ಮಳೆ ಸಂದರ್ಭದಲ್ಲಿ ಧಾರಾಕಾರ ವರ್ಷಧಾರೆಯಿಂದ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ತತ್ಪರಿಣಾಮವಾಗಿ ಕಡಲ ಕಿನಾರೆಯ ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಅವರು ಕಾರಣ ನೀಡಿದ್ದಾರೆ.
ಭಾರತವು ಅತ್ಯಾಧುನಿಕ ಉಪಗ್ರಹ ವ್ಯವಸ್ಥೆ ಮತ್ತು ಹವಾಮಾನ ಮುನ್ಸೂಚನೆ ಮಾಹಿತಿ ವ್ಯವಸ್ಥೆಯನ್ನು ಹೊಂದಿದ್ದರೂ ಎಚ್ಚರಿಕೆಯನ್ನು ನಿರ್ಲಕ್ಷಿಸುವುದು ಮತ್ತು ಸಂಭಾವ್ಯ ಪ್ರಕೃತಿ ವಿಕೋಪಗಳನ್ನು ನಿಭಾಯಿಸುವ ಸಾಮಥ್ರ್ಯವಿಲ್ಲದಿರುವುದೇ ಇದಕ್ಕೆ ಕಾರಣ ಎಂದು ಹವಾಮಾನ ತಜ್ಞರು ವಿಷಾದದಿಂದ ನುಡಿಯುತ್ತಾರೆ.
ಇಂತಹ ಪ್ರಕೃತಿ ದುರಂತಗಳ ಸಂದರ್ಭದಲ್ಲಿ ಸರ್ಕಾರಗಳು ಸಂಪೂರ್ಣ ಯುದ್ಧೋಪಾದಿಯಲ್ಲಿ ಸನ್ನದ್ಧವಾಗಬೇಕು. ಜನರಿಗೆ ಈ ಬಗ್ಗೆ ಸೂಕ್ತ ಎಚ್ಚರಿಕೆ ನೀಡಿ ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ಪೂರ್ವ ತರಬೇತಿ ನೀಡಬೇಕು. ಆಗ ಮಾತ್ರ ಸಾವು-ನೋವು-ನಷ್ಟ ತಡೆಗಟ್ಟಲು ಸಾಧ್ಯ ಎನ್ನುತ್ತಾರೆ ವಾಷಿಂಗ್ಟನ್‍ನ ವಿಪತ್ತು ನಿರ್ವಹಣಾ ಕೇಂದ್ರದ ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಸ್ಟಿಫಾನೆ ಆ್ಯಲಗೇಟ್.
ಮುಂದೆ ಇಂತಹ ಮತ್ತಷ್ಟು ಗಂಡಾಂತರಗಳು ಮರುಕಳಿಸುವ ಬಗ್ಗೆ ಸ್ಟಿಫಾನೆ ಗಂಭೀರ ಎಚ್ಚರಿಕೆ ನೀಡಿದ್ದಾರೆ. 2005ರ ವೇಳೆಗೆ ಜಾಗತಿಕವಾಗಿ ನೀರಿನ ಮಟ್ಟ 20 ಸೆಂ.ಮೀ.ನಷ್ಟು ಹೆಚ್ಚಾಗಲಿದೆ. ಇದರ ಪರಿಣಾಮ ಇನ್ನಷ್ಟು ಘೋರ. ಇದರಿಂದ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಂದು ಲಕ್ಷ ಕೋಟಿ ಡಾಲರ್‍ಗೂ ಅಧಿಕ ನಷ್ಟ ಸಂಭವಿಸುತ್ತದೆ. ಸಾವು-ನೋವಿನ ಸಂಖ್ಯೆಯಂತೂ ಊಹಾತೀತ ಎಂದು ಎಚ್ಚರಿಕೆ ನೀಡಿದ್ದಾರೆ.
ಭಾರತದ ಕರಾವಳಿ ರಾಜ್ಯಗಳೇ ಅಲ್ಲದೆ ದ್ವೀಪರಾಷ್ಟ್ರ ಶ್ರೀಲಂಕಾ, ಇಂಡೋನೇಷ್ಯಾ, ಫಿಲಿಪ್ಪೈನ್ಸ್, ಬಾಂಗ್ಲಾದೇಶ, ಥೈಲ್ಯಾಂಡ್ ಮೊದಲಾದ ಏಷ್ಯಾಖಂಡದ ರಾಷ್ಟ್ರಗಳು ಸಹ ಇದೇ ರೀತಿಯ ನೈಸರ್ಗಿಕ ದುರಂತಕ್ಕೆ ಸಿಲುಕಿ ಜರ್ಝರಿತವಾಗುತ್ತವೆ ಎಂದು ತಿಳಿಸಿದ್ದಾರೆ.
ಕೇರಳ, ಕರ್ನಾಟಕದ ಕೊಡಗು, ಮಂಗಳೂರು ಸೇರಿದಂತೆ ವಿವಿಧೆಡೆ ಸಂಭವಿಸಿರುವ ಜಲಪ್ರಳಯದ ಅಗಾಧ ದುಷ್ಪರಿಣಾಮದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವದ ವಿವಿಧ ದೇಶಗಳ ಪರಿಸರವಾದಿಗಳು ಮತ್ತು ಅರ್ಥಶಾಸ್ತ್ರಜ್ಞರು ಇದು ಕೇವಲ ಸ್ಯಾಂಪಲ್. ಮುಂದೆ ಮತ್ತಷ್ಟು ಘನಘೋರ ಗಂಡಾಂತರಗಳು ಸಂಭವಿಸುತ್ತವೆ. ಈಗಿನಿಂದಲೇ ಪರಿಣಾಮಕಾರಿ ಸಮಗ್ರ ರಕ್ಷಣಾ ಮತ್ತು ನಿರ್ವಹಣಾ ಸಿದ್ಧತೆಗಳನ್ನು ಮಾಡಿಕೊಳ್ಳದೆ ಇದ್ದರೆ ಅದಕ್ಕೆ ದೊಡ್ಡ ಮಟ್ಟದಲ್ಲಿ ಬೆಲೆ ತೆರಬೇಕಾಗುತ್ತದೆ ಎಂದು ಸರ್ಕಾರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ