ಕೇರಳ ಮತ್ತು ಕೊಡಗು ಜಲಪ್ರಳಯ: ಕಲ್ಲು ಗಣಿಗಾರಿಕೆ, ಕೆರೆಗಳ ಒತ್ತುವರಿ, ಅರಣ್ಯ ನಾಶ ಕಾರಣ

 

ಬೆಂಗಳೂರು, ಆ.21- ಕೇರಳ ಮತ್ತು ಕೊಡಗಿನಲ್ಲಿ ಸಂಭವಿಸಿದ ಮಳೆ ಅನಾಹುತಕ್ಕೆ ಈ ಎರಡೂ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ, ಕೆರೆಗಳ ಒತ್ತುವರಿ, ಅರಣ್ಯ ನಾಶ ಕಾರಣವಾಯಿತೇ..?
ಹೌದು ಎನ್ನುತ್ತಾರೆ ಪರಿಸರ ತಜ್ಞರು. 2010ರಲ್ಲೇ ಕೇರಳ ಮತ್ತು ಕೊಡಗಿನಲ್ಲಿ ಅರಣ್ಯ ನಾಶ, ಒತ್ತುವರಿ, ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಭಿವೃದ್ಧಿ ನೆಪದಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಅತ್ಯಾಚಾರದಿಂದ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದರು.
ತಜ್ಞರ ಈ ಎಚ್ಚರಿಕೆಯನ್ನು ಕಡೆಗಣಿಸಿದ ಪರಿಣಾಮವೇ ಇಂದು ಕೇರಳ ಮತ್ತು ಕೊಡಗಿನಲ್ಲಿ ಅನಾಹುತ ಸಂಭವಿಸಲು ಕಾರಣ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದ ಪೆÇ್ರ. ಮಾದವ್ ಗಾಡ್ಗೀಳ್ ಅವರು.

ಜವಾಬ್ದಾರಿ ಇಲ್ಲದ ಪರಿಸರ ನಿಯಮಗಳು, ಕಲ್ಲು ಕ್ವಾರಿ, ಪ್ರವಾಸೋದ್ಯಮದ ಹೆಸರಿನಲ್ಲಿ ಭೂ ಕಬಳಿಕೆ, ಅರಣ್ಯ ನಾಶವೇ ಇಂದಿನ ಭೀಕರ ಪ್ರವಾಹ ಪರಿಸ್ಥಿತಿ ಮತ್ತು ಭೂ ಕುಸಿತಕ್ಕೆ ಕಾರಣ ಎನ್ನುವುದು ಗಾಡ್ಗೀಳ್ ಅವರ ವಾದವಾಗಿದೆ.
ಪರಿಸರದ ಸೂಕ್ಷ್ಮ ವಲಯ ಎಂದೇ ಗುರುತಿಸಲ್ಪಟ್ಟಿರುವ ಪಶ್ಚಿಮ ಘಟ್ಟದ ಪ್ರದೇಶಗಳ ಮೇಲೆ ಮಾನವನ ಮಾರಣಾಂತಿಕ ದಾಳಿ ನಿರಂತರವಾಗಿ ನಡೆಯುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳ ಕಡಿತ, ಅರಣ್ಯ ನಾಶದಂತಹ ದುರಂತ ಕಾರ್ಯ ಮುಂದುವರಿದಿದೆ. ಈ ಪರಿಸರ ಮಾರಕ ನಿಯಮಗಳನ್ನು ಬದಲಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಗಂಡಾಂತರ ಗ್ಯಾರಂಟಿ ಎನ್ನುತ್ತಾರೆ ಅವರು.

 

ಪರಿಸರ ಕಾಪಾಡುವ ಕುರಿತಂತೆ ಕೇಂದ್ರ ಸರ್ಕಾರ 2010ರಲ್ಲಿ ಗಾಡ್ಗೀಳ್ ಸಮಿತಿಯನ್ನು ರಚಿಸಿತ್ತು. ಸಾಧಕ-ಬಾಧಕಗಳನ್ನು ಪರಿಶೀಲಿಸಿದ ಗಾಡ್ಗೀಳ್ ಅವರು ಅರಣ್ಯನಾಶಕ್ಕೆ ಕಡಿವಾಣ ಹಾಕದಿದ್ದರೆ ಮುಂದೆ ಭಾರೀ ಆಪತ್ತು ಕಾದಿದೆ ಎಂದು 552 ಪುಟಗಳ ವರದಿ ನೀಡಿದ್ದರು.
ಆದರೆ, ಈ ವರದಿ ಜಾರಿಗೆ ಪಶ್ಚಿಮಘಟ್ಟ ವ್ಯಾಪ್ತಿಯ ಕೇರಳ, ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಗಾಡ್ಗೀಳ್ ಸಮಿತಿ ಧೂಳು ಹಿಡಿಯತೊಡಗಿತು.
ಇದಾದ ನಂತರ ಖ್ಯಾತ ಪರಿಸರ ತಜ್ಞ ಹಾಗೂ ವಿಜ್ಞಾನಿಯಾಗಿರುವ ಕೆ.ಕಸ್ತೂರಿ ರಂಗನ್ ಅವರು ಅತಿ ಸೂಕ್ಷ್ಮ ವಲಯಗಳಲ್ಲಿ ಗಣಿಗಾರಿಕೆ, ರಸ್ತೆ ನಿರ್ಮಾಣಕ್ಕೆ ಕಡಿವಾಣ ಹಾಕುವಂತೆ ವರದಿ ನೀಡಿದ್ದರು.
ಮಾತ್ರವಲ್ಲದೆ, ಸರಿಸುಮಾರು 40ಕ್ಕೂ ಹೆಚ್ಚು ಜಲಮೂಲಗಳನ್ನು ಹೊಂದಿರುವ ಕೇರಳದಲ್ಲಿ ಇದುವರೆಗೂ 907 ಎಕರೆ ಅರಣ್ಯ ಭೂಮಿ ನಾಶಪಡಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಸಾಧ್ಯತೆ ಇದೆ ಎಂದು ಕಸ್ತೂರಿ ರಂಗನ್ ಅವರು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದ್ದರು.
ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಅವರ ವರದಿಯನ್ನಾಧರಿಸಿ ಕರ್ನಾಟಕ ಸೇರಿದಂತೆ ಆರು ರಾಜ್ಯಗಳಲ್ಲಿ ವಿಸ್ತರಿಸಿಕೊಂಡಿರುವ ಪಶ್ಚಿಮ ಘಟ್ಟಗಳ 60 ಸಾವಿರ ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಸ್ಥಳವೆಂದು ಘೋಷಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿತ್ತು.

ಪರಿಸರ ತಜ್ಞರ ವರದಿ ಜಾರಿಗೆ ಬಂದರೆ ತಲತಲಾಂತರದಿಂದ ಕಾಡಿನಲ್ಲಿ ವಾಸಿಸುತ್ತಿರುವ ಜನಾಂಗಗಳು ಊರು-ಕೇರಿ ಬಿಟ್ಟು ಬೀದಿಗೆ ಬೀಳಬೇಕಾದ ಪರಿಸ್ಥಿತಿ ತಲೆದೋರಲಿದೆ ಎಂಬ ವಿಷಯ ಹಬ್ಬುತ್ತಿದ್ದಂತೆ ಕೇರಳದಲ್ಲಿ ಹಲವಾರು ಸಂಘಟನೆಗಳು ವರದಿ ಜಾರಿಗೊಳಿಸಬಾರದು ಎಂದು ಉಗ್ರ ಪ್ರತಿಭಟನೆಗಿಳಿದ ಪರಿಣಾಮ ಕೇರಳ ಸರ್ಕಾರ ಎರಡೂ ವರದಿಗಳನ್ನು ಒಪ್ಪಲು ನಿರಾಕರಿಸಿತು.
ಅದೇ ರೀತಿ ಕೊಡಗಿನಲ್ಲಿರುವ 1550 ಗ್ರಾಮಗಳು ಸೂಕ್ಷ್ಮ ಪ್ರದೇಶ ವ್ಯಾಪ್ತಿಗೊಳಪಟ್ಟಿದ್ದವು. ಅಲ್ಲಿನ 53 ಗ್ರಾಮಗಳಲ್ಲಿರುವ ಕೊಡವರು ವರದಿ ಜಾರಿ ಮಾಡಬಾರದು ಎಂದು ಪಟ್ಟು ಹಿಡಿದಿದ್ದರು.
ಕೇರಳಿಗರು ಮತ್ತು ಕೊಡವರ ಹೋರಾಟದಿಂದ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ಅವರ ವರದಿ ಜಾರಿಗೊಳಿಸದ ಪರಿಣಾಮವೇ ಇಂದು ಆ ಎರಡೂ ಪ್ರದೇಶಗಳಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ಉಂಟಾಗಲು ಕಾರಣ ಎನ್ನುತ್ತಾರೆ ಪರಿಸರ ತಜ್ಞರು.
ಇನ್ನು ಮುಂದಾದರೂ ತಜ್ಞರು ನೀಡಿರುವ ವರದಿಯನ್ನಾಧರಿಸಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಮತ್ತಷ್ಟು ಗಂಡಾಂತರ ಎದುರಿಸಬೇಕಾಗುತ್ತದೆ ಜಾಗ್ರತೆ..!

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ