ಬೆಂಗಳೂರು, ಆ.20-ಪ್ರಕೃತಿ ವಿಕೋಪಕ್ಕೆ ಸಿಲುಕಿ ಕೊಡಗಿನಲ್ಲಿ ನಿರಾಶ್ರಿತರಾಗಿ ಮನೆ ಕಳೆದುಕೊಂಡಿರುವವರಿಗೆ ಪ್ರೀಫ್ಯಾಬ್ರಿಕ್ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ನಿರ್ಧರಿಸಿದೆ.
ಮಳೆ ನಿಂತ ಮೇಲೆ ಮನೆ ಕಳೆದುಕೊಂಡಿರುವವರ ಮಾಹಿತಿ ಪಡೆದು ಒಂದು ದಿನದೊಳಗೆ ನಿರ್ಮಾಣ ಮಾಡಿಕೊಡಬಹುದಾದಂತಹ ಪ್ರೀಫ್ಯಾಬ್ರಿಕ್ ಹೌಸ್‍ಗಳನ್ನು ನಿರಾಶ್ರಿತರಿಗೆ ಒದಗಿಸಲಾಗುವುದು ಎಂದು ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.
ಸಿದ್ಧಾರ್ಥ ಸಂಸ್ಥೆ ವತಿಯಿಂದ ಆಹಾರ ಪದಾರ್ಥ, ವಿವಿಧ ಪರಿಹಾರ ಸಾಮಗ್ರಿಗಳನ್ನು ಹೊತ್ತ ನಾಲ್ಕು ಟ್ರಕ್‍ಗಳಿಗೆ ಸದಾಶಿವನಗರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗಿನಲ್ಲಿ ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಮನೆ ಕಳೆದುಕೊಂಡವರಿಗೆ ಈ ತಕ್ಷಣ ಮನೆ ಒದಗಿಸಬೇಕಿದೆ. ಅದಕ್ಕಾಗಿ ಪ್ರೀ-ಫ್ಯಾಬ್ರಿಕೇಷನ್ ಹೌಸ್‍ಗಳನ್ನು ಒದಗಿಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಗಳೊಂದಿಗೂ ಸಹ ಸಮಾಲೋಚನೆ ನಡೆಸಲಾಗಿದೆ. ಮಳೆ ನಿಂತ ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಮೈಸೂರು, ಮಂಗಳೂರು, ಹಾಸನದಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದಿದ್ದು, ಅಗತ್ಯ ಪದಾರ್ಥಗಳನ್ನು ದಾನಿಗಳು ಇಲ್ಲಿಗೆ ತಲುಪಿಸಬಹುದು ಎಂದು ಪರಮೇಶ್ವರ್ ತಿಳಿಸಿದರು.
ಬಿಬಿಎಂಪಿಯಿಂದ 100 ಇ-ಶೌಚಾಲಯಗಳ, 300 ಪೌರಕಾರ್ಮಿಕರನ್ನು ಕೊಡಗಿಗೆ ಕಳುಹಿಸಿಕೊಡಲಾಗಿದೆ. ಬಿಡಬ್ಲ್ಯುಎಸ್‍ಎಸ್‍ಬಿ ಸಿಬ್ಬಂದಿ, ಇಂಜಿನಿಯರ್‍ಗಳನ್ನೂ ಕೂಡ ರವಾನಿಸಲಾಗಿದೆ. ಬಿಬಿಎಂಪಿ ವತಿಯಿಂದ 3.18 ಕೋಟಿ ರೂ. ಚೆಕ್‍ನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಇದರಲ್ಲಿ ಒಂದು ಕೋಟಿ ಕೇರಳ ಸಂತ್ರಸ್ಥರಿಗೆ, 2.18 ಕೋಟಿ ಕೊಡಗಿಗೆ ನೀಡಲಾಗಿದೆ ಎಂದು ಹೇಳಿದರು.
ಸಿದ್ಧಾರ್ಥ ಶಿಕ್ಷಣ ಸಂಸ್ಥೆ ವತಿಯಿಂದ ಆಹಾರ ಪದಾರ್ಥ ಮತ್ತು ಪರಿಹಾರ ಸಾಮಗ್ರಿಗಳನ್ನು ಕೊಡಗಿಗೆ ಕಳುಹಿಸಿಕೊಡಲಾಗುತ್ತಿದೆ. ಎರಡು ಟ್ರಕ್‍ಗಳಷ್ಟು ಬೆಡ್‍ಶೀಟ್, ಕುಡಿಯುವ ನೀರು, ಹಾಸಿಗೆ, ಔಷಧಿ, ಮತ್ತೆರಡು ಟ್ರಕ್‍ಗಳಷ್ಟು ದವಸಧಾನ್ಯ, ಆಹಾರ ಪದಾರ್ಥಗಳನ್ನು ಕಳುಹಿಸಿಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಇಂತಹ ಪರಿಸ್ಥಿತಿಯಲ್ಲಿ ತಾವು ಸಿಂಗಪೂರಕ್ಕೆ ಪ್ರವಾಸ ತೆರಳಿದ್ದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು,ಪೂರ್ವ ನಿಯೋಜಿತ ಕಾರ್ಯಕ್ರಮದಂತೆ ಅಲ್ಲಿಗೆ ತೆರಳಿದ್ದೆ. ಆದರೂ ಇಲ್ಲಿನ ಪರಿಸ್ಥಿತಿಯ ಮೇಲೆ ತೀವ್ರ ನಿಗಾ ವಹಿಸಿದ್ದು, ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೆ ಎಂದು ಅವರು ಹೇಳಿದರು.
ಬಿಬಿಎಂಪಿ ಮತ್ತು ಪೆÇಲೀಸ್ ಸಿಬ್ಬಂದಿ ತಮ್ಮ ಒಂದು ದಿನದ ವೇತನವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.
ನಿರಾಶ್ರಿತರ ಶಿಬಿರದಲ್ಲಿ ಆಹಾರ ವಿತರಿಸುವಾಗ ಸಚಿವ ರೇವಣ್ಣ ಅವರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ರೇವಣ್ಣ ಅವರು ಹಾಗೆ ಮಾಡಲಿಕ್ಕೆ ಸಾಧ್ಯವಿಲ್ಲ. ನಿರಾಶ್ರಿತರ ಬಗ್ಗೆ ಹೆಚ್ಚು ಕಾಳಜಿಯಿಂದ ವರ್ತಿಸುತ್ತಿದ್ದಾರೆ ಎಂದು ರೇವಣ್ಣ ಅವರನ್ನು ಸಮರ್ಥಿಸಿಕೊಂಡರು.