ರಾಜ್ಯದ ಅತಿವೃಷ್ಠಿ, ಪ್ರವಾಹ, ಮಳೆ ಹಾನಿ, ಬರ ಪರಿಸ್ಥಿತಿ ಕುರಿತು ಸಿಎಂ ಸಭೆ

 

ಬೆಂಗಳೂರು, ಆ.16-ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಠಿ, ಪ್ರವಾಹ, ಮಳೆ ಹಾನಿ, ಬರ ಪರಿಸ್ಥಿತಿ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಮಲೆನಾಡು ಕೊಡಗು, ಕರಾವಳಿ ಭಾಗದಲ್ಲಿ ನಿರಂತರವಾಗಿ ಬೀಳುತ್ತಿರುವ ಕುಂಭದ್ರೋಣ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳೆಹಾನಿ, ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕವೂ ಹಾನಿಗೀಡಾಗಿದೆ. ಜಾನುವಾರು, ಜೀವಹಾನಿಯೂ ಉಂಟಾಗಿದೆ. ಆಸ್ತಿ ನಷ್ಟವೂ ಸಂಭವಿಸಿದೆ. ನೈಸರ್ಗಿಕ ವಿಕೋಪಕ್ಕೆ ಸಂಬಂಧಿಸಿದಂತೆ ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ಉನ್ನತ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿ ನಡೆಸಲಿದ್ದಾರೆ.

ಈ ಸಭೆಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳು, ಸಮಸ್ಯೆಯ ತೀವ್ರತೆ, ಪರಿಹಾರ ಕ್ರಮ, ಮುಂದೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಹಾನಿಗೀಡಾಗಿರುವ ಮೂಲಸೌಲಭ್ಯ ಸರಿಪಡಿಸುವಿಕೆ ಮೊದಲಾದ ವಿಚಾರಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಸೂಕ್ತ ನಿರ್ದೇಶನವನ್ನು ನೀಡುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅದೇ ರೀತಿ ರಾಜ್ಯದ 12-13 ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿದ್ದು, ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ರಾಜ್ಯದ ಒಳನಾಡಿನ ಬಹಳಷ್ಟು ಕಡೆಗಳಲ್ಲಿ ಮಳೆ ಅಭಾವ ಉಂಟಾಗಿ ಬರ ಪರಿಸ್ಥಿತಿ ಎದುರಿಸುವಂತಾಗಿದೆ. ಬರಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳಬೇಕಿರುವ ತುರ್ತು ಕಾರ್ಯಗಳ ಬಗ್ಗೆಯೂ ಚರ್ಚಿಸಿ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ನೀಡಲಿದ್ದಾರೆ.
ರಾಜ್ಯದ ಎಲ್ಲಾ ಪ್ರಮುಖ ಜಲಾಶಯಗಳು ಭರ್ತಿಯಾಗಿದ್ದು, ಎಲ್ಲಾ ನದಿಗಳಲ್ಲೂ ಪ್ರವಾಹ ಪರಿಸ್ಥಿತಿ ಕಂಡುಬರುತ್ತಿದೆ. ಜಲಸಂಪನ್ಮೂಲ ಇಲಾಖೆ, ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆಗಳು ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೂ ಚರ್ಚಿಸಿ ಸೂಕ್ತ ಸೂಚನೆಗಳನ್ನು ಮುಖ್ಯಮಂತ್ರಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ